ಸುದ್ದಿವಿಜಯ,ಜಗಳೂರು: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಹುಟ್ಟು ಹಬ್ಬಕ್ಕೆ ಜಗಳೂರು ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರು 55 ಸಾವಿರ ಲಾಡು ಉಂಡೆ ಸಿದ್ಧಪಡಿಸಿದ್ದಾರೆ.
ಎಸ್‍ಎಸ್‍ಎಂ ಅವರ 55ನೇ ಜನ್ಮದಿನೋತ್ಸವಕ್ಕೆ ವೈಯಕ್ತಿಕವಾಗಿ ಅಂದಾಜು ಆರು ಲಕ್ಷ ರೂ ವೆಚ್ಚದಲ್ಲಿ 55 ಸಾವಿರ ಲಾಡು ಉಂಡೆಯನ್ನು ಸಿದ್ಧಪಡಿಸಿದ್ದು ಸೆ.21ರಂದು ದಾವಣಗೆರೆಗೆ ಕಳುಹಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
9 ಕ್ವಿಂಟಾಲ್ ಸಕ್ಕರೆ, 6 ಕ್ವಿಂಟಾಲ್ ಕಡಲೆ ಹಿಟ್ಟು, 40 ಟಿನ್ ಶೇಂಗಾ ಎಣ್ಣೆ, 60 ಕೆಜಿ ದ್ರಾಕ್ಷಿ, 60 ಕೆಜಿ ಗೋಡಂಬಿ, 60 ಕೆಜಿ ನಂದಿನಿ ತುಪ್ಪ, 20 ಕೆಜಿ ಏಲಕ್ಕಿ, 20 ಕೆಜಿ ಲಾವಂಗ, 15 ಕೆಜಿ ಗಸಗಸೆ, 30 ಕೆಜಿ ಬಾದಾಮಿ ಮತ್ತು 25 ಕೆಜಿ ಪಿಸ್ತಾ ಪದಾರ್ಥಗಳನ್ನು ಮಿಶ್ರಣ ಮಾಡಿ ವಿಶೇಷವಾಗಿ ಲಾಡು ಉಂಡೆಗಳನ್ನು ತಯಾರು ಮಾಡಲಾಗಿದೆ. 5 ದಿನಗಳ ಕಾಲ 20 ಜನ ಬಾಣಸಿಗರು ಉಂಡೆಗಳನ್ನು ತಯಾರು ಮಾಡಿ ಬಾಕ್ಸ್‍ನಲ್ಲಿ ಇರಿಸಿ ಅವುಗಳನ್ನು ದಾವಣಗೆರೆಯ ದುರ್ಗಮ್ಮ ದೇವಸ್ಥಾನಕ್ಕೆ ರವಾನಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಅಂದು ಎಸ್.ಎಸ್.ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಸಿದ್ದವಾಗಿರುವ ಉಂಡೆಗಳನ್ನು ದೇವೇಂದ್ರಪ್ಪ ಸೇರಿದಂತೆ ಅವರ ಅಭಿಮಾನಿ ಬಳಗದವರು ಹಸ್ತಾಂತ ಮಾಡಲಿದ್ದಾರೆ.
ಸೆ.22 ರಂದು ಜಗಳೂರಿನಲ್ಲಿ 10 ಸಾವಿರ ಲಾಡು ಉಂಡೆಗಳನ್ನು ಸಾರ್ವಜನಿಕರಿಗೆ ವಿತರಿಣೆ ಮಾಡಲಿದ್ದಾರೆ. 55 ಬೀದಿವ್ಯಾಪಾರಿಗಳಿಗೆ ಉಚಿತವಾಗಿ ದೊಡ್ಡ ಕೊಡೆಗಳನ್ನು ನೀಡುವ ಮೂಲಕ ವಿಶೇಷವಾಗಿ ಜನ್ಮದಿನೋತ್ಸವ ಆಚರಿಸಲು ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮುಂದಾಗಿದ್ದಾರೆ.
ಬಡವರ ದೀನ ದಲಿತರ ಪಾಲಿಗೆ ಆಶಾಕಿರಣವಾಗಿರು ಎಸ್.ಎಸ್.ಮಲ್ಲಿಕಾರ್ಜುನ ಅವರ ಹುಟ್ಟುಹಬ್ಬವನ್ನು ಈ ಬಾರಿ ಜಗಳೂರಿನಲ್ಲಿ ವಿಶೇಷವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಅವರು ಸಚಿವರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು ಅಜರಾಮರ. ಅವರು ಮತ್ತೆ ಅಂಬಾರಿ ಹೋರುವ ಆನೆಯಂತೆ ರಾಜ್ಯವನ್ನು ಮುನ್ನಡೆಸುವ ಶಕ್ತಿ ಅವರಿಗೆ ಬರಲಿ. ನಾವೆಲ್ಲ ಸೇರಿ ಸಂಭ್ರಮದಿಂದ ಜನ್ಮದಿನ ಆಚರಿಸಲು ರೆಡಿಯಾಗಿದ್ದೇವೆ. ಹೀಗಾಗಿ 55 ಸಾವಿರ ಲಾಡು ಉಂಡೆಗಳನ್ನು ವಿತರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ.
-ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಕಾಂಗ್ರೆಸ್ ಮುಖಂಡರು ಜಗಳೂರು