ಸುದ್ದಿವಿಜಯ, ಜಗಳೂರು: ಜೀವನವನ್ನು ಕ್ರೀಡೆಗೆ ಹೋಲಿಸಿಕೊಂಡು ಸೋಲಿಗೆ ಬೆಲೆ ಕೊಡದೇ ಆತ್ಮವಿಶ್ವಾಸದಿಂದ ಮುನ್ನುಗ್ಗಿದೆ ಗೆಲುವು ಸಿಕ್ಕೇ ಸಿಗುತ್ತದೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳಿದರು.
ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಶನಿವಾರ ಶ್ರೀ ಗುರುಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಪ್ರಥಮ ಸುತ್ತಿನ ತರಳಬಾಳು ಕ್ರೀಡಾಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. 1978ರಲ್ಲಿ ನಾನು ಓದಿದ ಶಾಲೆ. ತರಳಬಾಳು ಶ್ರೀಗಳ ಆಶೀರ್ವಾದಿಂದ ಅನೇಕ ಬಡ ವಿದ್ಯಾರ್ಥಿಗಳು ಇದೇ ಶಾಲೆಯಲ್ಲಿ ಓದಿ ಜೀವನ ರೂಪಿಸಿಕೊಂಡಿದ್ದಾರೆ.
ಕ್ರೀಡೆಯನ್ನು ಸ್ಪರ್ಧಾತ್ಮಕ ಮನೋಭಾವದಿಂದ ನೋಡಬೇಕು. ಅಂಕಗಳನ್ನು ಸಹ ಕ್ರೀಡಾ ಮನೋಭಾವದಿಂದಲೇ ನೋಡಿ. ಅಂಕಗಳು ಬೌದ್ಧಿಕತೆಯ ಮಾನದಂಡವಲ್ಲ. ಅಂಕಕ್ಕೆ ಸೀಮತವಾಗದೇ ಸ್ಪರ್ಧಾತ್ಮಕವಾಗಿ ಬೆಳೆಯಿರಿ ಎಂದರು.
ನಾನು ಎರಡು ಬಾರಿ ಸೋತ ನಂತರ ಮೂರನೇ ಬಾರಿಗೆ ಶಾಸಕನಾಗಿ ಜನಸೇವೆ ಮಾಡುವ ಅವಕಾಶ ಸಿಕ್ಕಿತು. ಜನಸೇವೆ ಮಾಡಲಬೇಕು ಎಂದು ಸರಕಾರಿ ನೌಕರಿ ಬಿಟ್ಟುಬಂದೆ. ಶ್ರೀಗಳ ಆಶೀರ್ವಾದಿಂದ ಶಾಸಕನಾದೆ. ಆತ್ಮವಿಶ್ವಾಸ ಕಳೆದುಕೊಳ್ಳದೇ ಜೀವನದಲ್ಲಿ ಮುನ್ನುಗ್ಗಿ ಎಂದು ಕ್ರೀಡಾಪಟುಗಳಿಗೆ ಹುರಿದುಂಬಿಸಿದರು.
ಭೀಮಸಮುದ್ರ, ಹಿರೇಗುಂಟನೂರು, ಬಹದ್ದೂರ್‍ಘಟ್ಟ, ಸಿರಿಗೆರೆ, ಚಿತ್ರದುರ್ಗ, ಸಿಬಿಎಸ್‍ಸಿ ಮುತ್ತುಗದೂರು, ಮುತ್ತುಗದೂರು ಹೊಸ ಶಾಲೆ, ಬಿ.ದುರ್ಗ, ಬಿದರಕೆರೆ, ಸಂಪಿಗೆ ಎಚ್.ಎಸ್. ಸೇರಿದಂತೆ ಒಟ್ಟು 13 ಶಾಲೆಗಳ 900 ಕ್ರೀಟಾಪಟುಗಳು ಫುಟ್‍ಬಾಲ್, ಥ್ರೋಬಾಲ್, ಕಬಡ್ಡಿ, ಬ್ಯಾಡ್‍ಮಿಂಟನ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಜಿ.ಕೆ.ಸಿದ್ದಪ್ಪ, ಸದಸ್ಯರಾದ ಕೆ.ನಾರಪ್ಪ, ಡಿ.ತಿಪ್ಪೇಸ್ವಾಮಿ, ಕೆ.ಡಿ.ದಾಸಪ್ಪ, ಮುಖ್ಯಶಿಕ್ಷಕ ಶ್ರೀನಿವಾಸ್, ಬಸವಕುಮಾರ್, ಶಿವಮೂರ್ತಿ, ಶಿಕ್ಷಕರಾದ ಕರುಣಾಕರಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.