ರಾಷ್ಟ್ರಕಟ್ಟುವಲ್ಲಿ ಶಿಕ್ಷಕರ ಕಾರ್ಯ ಶ್ಲಾಘನೀಯ: ಶಾಸಕ ಎಸ್.ವಿ.ರಾಮಚಂದ್ರ ಅಭಿಮತ!

Suddivijaya
Suddivijaya September 5, 2022
Updated 2022/09/05 at 11:41 AM

ಸುದ್ದಿವಿಜಯ, ಜಗಳೂರು: ಪ್ರತಿಯೊಂದು ಸಮುದಾಯಗಳ ಮಕ್ಕಳಿಗೆ ಶಿಕ್ಷಣದ ಜ್ಞಾನವನ್ನು ತುಂಬುವ ಮೂಲಕ ರಾಷ್ಟ್ರಕಟ್ಟುವಲ್ಲಿ ಶಿಕ್ಷಕರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 134ನೇ ಜಯತ್ಯುತ್ಸವ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಸೋಮವಾರ ಗುರುಭವನದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ನನ್ನ ಗುರುಗಳು ನನಗೆ ಭೌದ್ಧಿಕ ಜ್ಞಾನ ತುಂಬಿದರ ಪರಿಣಾಮ ನಾನು ಶಾಸಕನಾಗಿದ್ದೇನೆ. ಗುರುವಿನಿಂದ ಲೋಕ, ಗುರುವಿನಿಂದ ಭಕ್ತಿ ಮತ್ತು ಮುಕ್ತಿ ಪ್ರಾಪ್ತವಾಗುತ್ತದೆ. ಗುರುವಿನ ಮಾರ್ಗದಲ್ಲಿ ನಡೆದರೆ ಎಲ್ಲವನ್ನೂ ಪಡೆಯಬಹುದು ಎಂದರು.

ಜಗಳೂರುಪಟ್ಟಣದ ಗುರುಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯನ್ನು ಶಾಸಕ ಎಸ್.ವಿ.ರಾಮಚಂದ್ರ ಉದ್ಘಾಟಿಸಿದರು.
ಜಗಳೂರುಪಟ್ಟಣದ ಗುರುಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯನ್ನು ಶಾಸಕ ಎಸ್.ವಿ.ರಾಮಚಂದ್ರ ಉದ್ಘಾಟಿಸಿದರು.

ಜಗಳೂರು ಕ್ಷೇತ್ರ ಬರದಿಂದ ಮುಕ್ತವಾಗಲು ನಾನು ಕಾಯ,ವಾಚ, ಮನಸ್ಸಾ ಶ್ರಮಿಸುತ್ತಿದ್ದೇನೆ. ಮಹತ್ವಾಕಾಂಕ್ಷಿಯ ಯೋಜನೆಗಳನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ನೀಡಿದ್ದರ ಪರಿಣಾಮ 57 ಕೆರೆಗಳಿಗೆ ನೀರುಣಿಸುವ ತುಂಗಭದ್ರಾ ಏತ ನೀರಾವರಿ ಯೋಜನೆಯಿಂದ ಡಿಸೆಂಬರ್ ಅಂತ್ಯದೊಳಗೆ 26 ಕೆರೆಗಳಿಗೆ ನೀರು ತುಂಬಿಸುತ್ತೇವೆ.

ನನ್ನ ಕನಸಿನ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದರಿಂದ 43 ಸಾವಿರ ಹೆಕ್ಟೇರ್ ಭೂಮಿಗೆ ಹನಿ ನೀರಾವರಿ ಸೌಲಭ್ಯ ಸಿಗುತ್ತದೆ. ನಮ್ಮ ಕ್ಷೇತ್ರದ ಜನತೆಗೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಬರಮುಕ್ತವಾಗಿ ನಮ್ಮ ಮಕ್ಕಳನ್ನು ಐಎಎಸ್-ಐಪಿಎಸ್, ಕೆಎಎಸ್ ಅಧಿಕಾರಿಗಳನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಜಗಳೂರುಪಟ್ಟಣದ ಗುರುಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಜಗಳೂರುಪಟ್ಟಣದ ಗುರುಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕುವೆಂಪು ವಿವಿ ಸಹ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಮಾತನಾಡಿ, ಇಂದು ನಾಳೆಗಳ ಗರ್ಭದಲ್ಲಿ ಶಿಕ್ಷಣದ ಬೀಜವವನ್ನು ಬಿತ್ತಿಹೋದ ಮಹಾನ್ ಚೇತನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾರತದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ಕೊಟ್ಟಂತಹ ಕೊಡುಗೆ ಅನನ್ಯವಾದುದು. ನಮ್ಮ ಮಕ್ಕಳಿಗೆ ನಾವು ಆಧ್ಯಾತ್ಮೀಕ ಮತ್ತು ಸಾಂಸ್ಕøತಿಕ ಶಿಕ್ಷಣ ನೀಡುವ ಮೂಲಕ ಅವರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು ಎಂದು ಶಿಕ್ಷಕರಿಗೆ ತಿಳಿಹೇಳಿದರು.

ಶಿಕ್ಷಕರ ದಿನಾಚರಣೆ ಸಮಿತಿ ಅಧ್ಯಕ್ಷ ಹಾಗೂ ತಾ.ಪಂ ಇಒ ವೈ.ಎಚ್.ಚಂದ್ರಶೇಖರ್ ಮಾತನಾಡಿ, ಶಿಕ್ಷಣ ಎಂಬುದು ಹಾಲು, ಮೊಸರು, ಬೆಣ್ಣೆ, ತುಪ್ಪದಂತೆ. ಹಾಲಿಗೆ ಒಂದು ದಿನ, ಮೊಸರಿಗೆ ಮೂರುದಿನ, ಬೆಣ್ಣೆಗೆ 10 ದಿನ ಸಮಯವಿರುತ್ತದೆ. ಆದರೆ ಬೆಣ್ಣೆಯನ್ನು ಕಾಯಿಸಿದ ಮೇಲೆ ತುಪ್ಪವಾದರೆ ಅದಕ್ಕೆ ವರ್ಷಾನುಗಟ್ಟಲೆ ಆಯಸ್ಸು ಇರುತ್ತದೆ. ಮಕ್ಕಳಿಗೆ ಶಿಕ್ಷಕರು ಭೌದ್ಧಿಕ ಜ್ಞಾನದ ಜೊತೆಗೆ ಪುನರಾವರ್ತೆನೆಯ ಶಿಕ್ಷಣ ನೀಡಿದರೆ ಅವರ ಜ್ಞಾನವು ಅಜರಾಮರವಾಗಿರುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಕ್ಷೇತ್ರಶಿಕ್ಷಣಾಧಿಕಾರಿ ಬಿ.ಉಮಾದೇವಿ ಪ್ರಾಸ್ತಾವಿಕ ನುಡಿದರು. ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಪಪಂ ಅಧ್ಯಕ್ಷೆ ಸಿ.ವಿಶಾಲಾಕ್ಷಿ ಓಬಳೇಶ್, ಪಪಂ ಉಪಾಧ್ಯಕ್ಷೆ ಎ.ನಿರ್ಮಲಾಕುಮಾರಿ, ಶಾಸಕರ ಪತ್ನಿ ಇಂದಿರಾ ಎಸ್.ವಿ.ರಾಮಚಂದ್ರ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎಂ.ವಿ.ರಾಜು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಪ್ಪ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್, ಕ್ಷೇತ್ರ ಸಮನ್ವಯಾಧಿಕಾರಿ ಡಿ.ಡಿ.ಹಾಲೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಶ್ರೀನಿವಾಸ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

 

Share this Article
Leave a comment

Leave a Reply

Your email address will not be published. Required fields are marked *

error: Content is protected !!