ಸುದ್ದಿವಿಜಯ, ಜಗಳೂರು: ಭಕ್ತಿ, ಶ್ರದ್ಧೆ, ಸತ್ಕಾರ್ಯಗಳನ್ನು ಭಕ್ತಿಪೂರ್ವಕವಾಗಿ ನೆರವೇರಿಸಿದಾಗ ಇಷ್ಠಾರ್ಥ ಸಿದ್ದಿಸಲಿದೆ ಎಂದು ಹಿರೇಹಡಗಲಿ ಶ್ರೀ ಹಾಲವೀರಪ್ಪಜ್ಜ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಮಂಗಳವಾರ ಶ್ರೀ ಸದ್ಗುರು ಶಿವಯೋಗಿ ಮೂಲತತ್ವ ಶ್ರೀ ಹಾಲಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಹಾಲಸ್ವಾಮಿಯ ಗದ್ದುಗೆಯ ಕೃಪೆಯಿಂದ ಭಕ್ತರ ಕಷ್ಟ ಕಾರ್ಪಣ್ಯಗಳು ದೂರವಾಗಿ, ಸುಖ ಸಮೃದ್ಧಿ ನೆಲೆಸುವಂತಾಗಲಿ. ಭಕ್ತಾಧಿಗಳು ದ್ವೇಷ ಅಸೂಯೆ ತೊರೆದು, ಪರಸ್ಪರ ಪ್ರೀತಿ ಪ್ರೇಮ ನೆಲೆಸಿ ಸಾಮರಸ್ಯ ಕಾಪಾಡಿಕೊಂಡು ಮುನ್ನಡೆಯುವಂತಾಗಬೇಕು ಎಂದರು.
ಕೆಲವು ನಕಲಿ ಸ್ವಾಮಿಗಳು ಖಾವಿ ಧರಿಸಿಕೊಂಡು ಬಂದು ಹಾಲಸ್ವಾಮಿಯ ಹೆಸರನ್ನು ಬಳಕೆ ಮಾಡಿಕೊಂಡು ಅಜ್ಜನವರು ಕಳಿಸಿದ್ದಾರೆಂದು ಸುಳ್ಳು ಹೇಳಿ ಅಕ್ಕಿ, ಬೇಳೆ, ಹಣ ವಸೂಲಿ ಮಾಡಿಕೊಂಡು ಹೋಗುತ್ತಿರುವುದು ಹರಪನಹಳ್ಳಿ ತಾಲೂಕಿನಲ್ಲಿ ಕಂಡು ಬಂದಿದ್ದು, ಈ ಭಾಗದಲ್ಲಿ ಅಂತಹ ವ್ಯಕ್ತಿಗಳು ಕಂಡುಬಂದರೆ ಮುಲಾಜಿಲ್ಲದೇ ಬಹಿಷ್ಕರಿಸಿ ಎಂದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಈ ಭಾಗದ ಜನರ ಆರಾಧ್ಯದೈವ ಹಾಲವೀರಪ್ಪಜ್ಜರ ಸನ್ನಿಧಿಯಲ್ಲಿ ಬೇಡಿಕೊಂಡರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ನಾನು ಸಹ ಪರಮಭಕ್ತನಾಗಿದ್ದು, ಸ್ವಾಮಿಯ ಆಶೀರ್ವಾದದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವಂತಾಗಿದೆ ಎಂದರು.
ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಮಾತನಾಡಿ, ಶ್ರೀಸ್ವಾಮಿಯ ಪವಾಡಕ್ಕೆ ಸಾಕ್ಷಿಯಾಗಿದೆ. ಗ್ರಾಮಕ್ಕೆ ಬರುವ ಪ್ರತಿಯೊಬ್ಬರೂ ಹಾಲಸ್ವಾಮಿಯ ಗದ್ದುಗೆ ದರ್ಶನ ಪಡೆದು ಮುಂದೆ ಸಾಗುವುದು ಪ್ರತೀತಿಯಲ್ಲಿದ್ದು, ಈ ಭಾಗದ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಮುಂಚೆ ಶ್ರೀಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ ಉತ್ತಮ ಮಳೆ ದಯಪಾಲಿಸುವಂತೆ ಬೇಡಿಕೊಳ್ಳುತ್ತಾರೆ.
ಮಳೆಯ ಅಭಾವ ಎದುರಾದಾಗ ಹಾಲಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಕುರುಹು ಕೇಳಿಕೊಂಡ ನಂತರ ಹೇಳಿದ ಅವಧಿಯೊಳಗೆ ಮಳೆ ನಿದರ್ಶನಗಳು ಇವೆ ಎಂದರು.
ನಿವೃತ್ತ ವಿಶೇಷ ಕರ್ತವ್ಯಾಧಿಕಾರಿ ತಿಪ್ಪೇಸ್ವಾಮಿ, ಉಪನ್ಯಾಸಕ ಬಿ.ಭೋಜಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಮಾಜಿ ಜಿಪಂ ಸದಸ್ಯ ಎಸ್.ಕೆ.ಮಂಜುನಾಥ್, ಮಾಜಿ ಎಪಿಎಂಸಿ ಅಧ್ಯಕ್ಷ ಯು.ಜಿ.ಶಿವಕುಮಾರ್, ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್. ಸಿದ್ದೇಶ್, ಮುಖಂಡರಾದ ತಿಮ್ಮಣ್ಣ, ಮಾಗಡಿ ಹಾಲಪ್ಪ, ದಳಪತಿ ವೀರಯ್ಯ, ಬಸಣ್ಣ, ಬಿಸ್ತುವಳ್ಳಿ ಬಾಬು, ಮರುಳಾರಾಧ್ಯ ಎ.ಎಂ. ಕೆ.ಹೆಚ್.ನಾಗರಾಜ್, ರಾಜಾಸಾಬ್, ಡಿ.ಹನುಮಂತಪ್ಪ, ಹೊಸಕೋಟೆ ರಾಜು, ಗಂಗಾಧರಪ್ಪ ಸೇರಿದಂತೆ ಗ್ರಾಮಸ್ಥರು ಹಾಗೂ ಸಕಲ ಭಕ್ತಾದಿಗಳು ಭಾಗವಹಿಸಿದ್ದರು.