ಸುದ್ದಿವಿಜಯ, ಜಗಳೂರು: ಭಾರತದಲ್ಲಿ ಜನ್ಮತಾಳಿದ ಯೋಗ ಪ್ರಸ್ತುತ ವಿಶ್ವದಾದ್ಯಂತ ವಿಸ್ತಾರಗೊಳ್ಳುತ್ತಿದ್ದು, ಯೋಗಾಸನಗಳನ್ನು ಮಾಡುವುದರಿಂದ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ ಎಂದು ಸರಕಾರಿ ಆಯುರ್ವೇದ ವೈದ್ಯರಾದ ಡಾ.ಶ್ವೇತಾ ಹೇಳಿದರು.
ಪಪಂ ಕಾರ್ಯಾಲಯ, ಸಾರ್ವಜನಿಕ ಆಸ್ಪತ್ರೆ, ಸರಕಾರಿ ಯೋಗ ಮತ್ತು ಚಿಕಿತ್ಸಾ ಕೇಂದ್ರ ಸಹಯೋಗದಲ್ಲಿ ಗುರುವಾರ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮತ್ತು ಯೋಗ, ಧ್ಯಾನ ಶಿಬಿರದಲ್ಲಿ ಯೋಗಾಸನ ಹೇಳಿಕೊಟ್ಟರು.
ಪೌರಕಾರ್ಮಿಕರು ಆರೋಗ್ಯದ ಕಡೆ ಗಮನ ಹೊಡಬೇಕು. ಅನೇಕ ಕಾರ್ಮಿಕರು ಕೈಕಾಲು, ನೋವು ಸೊಂಟ ನೋವಿನಿಂದ ಬಳಲುತ್ತಿದ್ದೀರಿ. ಯೋಗದ ವಿವಿಧ ಆಸನಗಳಾದ ಅರ್ಥಚಕ್ರಸಾನ, ಸೂರ್ಯನಮಸ್ಕಾರ, ಪ್ರಾಣಾಯಾಮ, ಧ್ಯಾನವನ್ನು ನಿತ್ಯ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ. ದೇಹದ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಹೇಳಿದರು.
ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ ಮಾತನಾಡಿ, ಪಟ್ಟಣದ ಸ್ವಚ್ಛತೆಗೆ ಪ್ರಾಧಾನ್ಯತೆ ನೀಡುವ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್‍ಗಳನ್ನು ಹಾಕಿಕೊಂಡು ಒಣಕಸ-ಹಸಿಕಸಗಳನ್ನು ಪ್ರತ್ಯೇಕವಾಗಿ ಬೇರ್ಪಡಿಸಿದ ಕಸಗಳನ್ನು ಮಾತ್ರ ಸ್ವೀಕರಿಸಿ. ಪ್ಲಾಸ್ಟಿಕ್ ನಿಷೇಧವಿದ್ದರೂ ಕೆಲವರು ಪ್ಲಾಸ್ಟಿಕ್‍ಗಳನ್ನು ಬಳಸುತ್ತಿದ್ದಾರೆ ಅವರಿಗೆ ಜಾಗೃತಿ ಮೂಡಿಸಿ ಎಂದು ಕಾರ್ಮಿಕರಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಪಪಂ ಆರೋಗ್ಯಾಧಿಕಾರಿ ಕಿಫಾಯತ್, ಪಪಂ ಅಧ್ಯಕ್ಷರಾದ ಸಿ.ವಿಶಾಲಾಕ್ಷಿ ಓಬಳೇಶ್, ಮಂಜಪ್ಪ, ಮೋದಿನ್, ಮಹಮ್ಮದ್, ನವೀನ್ ಸೇರಿದಂತೆ ನೂರಾರು ಪೌರ ಕಾರ್ಮಿಕರು ಯೋಗಾಸನದಲ್ಲಿ ಭಾಗವಹಿಸಿದ್ದರು.