ಶಾಸಕ ಎಸ್.ವಿ.ರಾಮಚಂದ್ರ ಶೇ.40 ಪರ್ಸೆಂಟೇಜ್ ಫಲಾನುವಿ: ಮಾಜಿ ಶಾಸಕ ಎಚ್‌.ಪಿ.ರಾಜೇಶ್‌ ಗಂಭೀರ ಆರೋಪ!

Suddivijaya
Suddivijaya June 28, 2022
Updated 2022/06/28 at 1:39 AM

ಸುದ್ದಿವಿಜಯ,ಜಗಳೂರು: ಶಾಸಕ ಎಸ್.ವಿ.ರಾಮಚಂದ್ರ ಅವರು ದುರಸ್ಥಿಗೆ ಬಾರದೇ ಇದ್ರೂ ಒಳ್ಳಯ ರಸ್ತೆಗಳನ್ನು ಕಿತ್ತು ಹಾಕಿ ಅಭಿವೃದ್ಧಿ ಹೆಸರಿನಲ್ಲಿ ಶೇ.40ರಷ್ಟು ಪರ್ಸೆಂಟ್ ಪಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಗಂಭೀರ ಆರೋಪ ಮಾಡಿದರು.

ಪಟ್ಟಣದ ತಾಲೂಕು ಕಚೇರಿ ಮುಂಬಾಗ ಸೋಮವಾರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ಕೇಂದ್ರ ಬಿಜೆಪಿ ಸರಕಾರದ ʼಅಗ್ನಿಪಥ್ʼ ಯೋಜನೆ ವಿರುದ್ಧ ಹಮ್ಮಿಕೊಂಡಿದ್ದ ಶಾಂತಿಯುತ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಸಕರು ಪ್ರತಿ ಗ್ರಾಪಂಗಳಲ್ಲಿ 15 ನೇ ಹಣಕಾಸಿನಲ್ಲಿ ಶೇ. 40 ಸೇರಿದಂತೆ ವಸತಿಯೋಜನೆಯಡಿ ಫಲಾನುಭವಿಗಳಿಂದ ಪರ್ಸೆಂಟೇಜ್ ಪಡೆದಿದ್ದಾರೆ. ಸರಕಾರಿ ಕಾರ್ಯಕ್ರಮಗಳನ್ನು ಬಿಜೆಪಿ ಸಮಾವೇಶಗಳಂತೆ ನಡೆಸಿ ಅದರಲ್ಲೂ ಅಧಿಕಾರಿಗಳಿಂದ ಹಣ ಪಡೆದಿದ್ದಾರೆ. ಅಲ್ಲದೆ ಕ್ಷೇತ್ರದ ಆಡಳಿತ ವೈಫಲ್ಯ ಕಂಡಿದೆ ಎಂದು ಆರೋಪಿಸಿದರು.

ಬಿಜೆಪಿ ಆಡಳಿತ ಸರಕಾರದ ಅವಧಿಯಲ್ಲಿ ಭಾರತೀಯ ಸೇನಾಪಡೆಗೆ ಭದ್ರತೆ ಮರೀಚಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟಿದ್ದ ರಕ್ಷಣಾಪಡೆಯ ಮುಖ್ಯಸ್ಥ ಜನರಲ್‌ ಬಿಪನ್‌ ರಾವತ್‌ ಅವರ ವಿಮಾನ ಅಪಘಾತ ಮೋದಿ ಅವರ ಆಡಳಿತ ವೈಖರಿಯನ್ನು ಬಿಂಬಿಸುತ್ತದೆ.ಇದೀಗ ಅಗ್ನಿ ಪಥ್ ಯೋಜನೆಯಡಿ ಯುವ ಸೈನಿಕರ ಸಾಮಾಜಿಕ ಭದ್ರತೆ ಕಸಿದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ಬಿಜೆಪಿ ಆಡಳಿತ ಸರಕಾರ ದೇಶದ 1 ಲಕ್ಷದ 41ಸಾವಿರ ಯುವಕರಿಗೆ ಉದ್ಯೋಗ ಕಲ್ಪಿಸುವ ಭರವಸೆ ಹುಸಿಯಾಗಿದೆ. ಕೂಡಲೇ ಉದ್ಯೋಗ ಒದಗಿಸಬೇಕು. ಸೇನೆ ಬಲವರ್ಧನೆ ಗೊಳಿಸಬೇಕು ಅಗ್ನಿಫಥ್ ಯೋಜನೆಯ ಮಾನದಂಡಗಳಿಂದ ಶೇ. 75 ರಷ್ಟು ಯುವಕರನ್ನು ಸೈನ್ಯದಿಂದ ಹೊರಗಿಟ್ಟರೆ ಭವಿಷ್ಯಕ್ಕೆ ಭದ್ರತೆಯಿಲ್ಲದೆ ಕಂಗಾಲಾಗಿ ಸಮಾಜಬಾಹಿರ ಚಟುಚಟಿಕೆಯಲ್ಲಿ ತೊಡಗಲು ಪ್ರಚೋದನೆ ನೀಡಿದಂತಾಗುವುದು ಎಂದು ವಿರೋಧಿಸಿದರು.

ಕೆಪಿಸಿಸಿ ಎಸ್.ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಮತ್ತು ಕಾಂಗ್ರೆಸ್ ಮುಖಂಡ ಚಿಕ್ಕಮ್ಮನ ಹಟ್ಟಿ ದೇವೇಂದ್ರಪ್ಪ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಸಿ.ತಿಪ್ಪೇಸ್ವಾಮಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ, ಪಲ್ಲಾಗಟ್ಟೆ ಶೇಖರಪ್ಪ, ರುದ್ರೇಶ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಆರೋಪದಲ್ಲಿ ಸತ್ಯಾಂಶವಿಲ್ಲ: ಎಸ್‌ವಿಆರ್‌ ಪ್ರತಿಕ್ರಿಯೆ:-
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ. ಅವರು ವಿರೋಧ ಪಕ್ಷದವರಾಗಿ ಮಾಡಲು ಏನೂ ಕೆಲಸವಿಲ್ಲದೇ ಬಾಯಿ ಚಪಲ ತೀರಿಸಿಕೊಳ್ಳಲು ಮಾತನಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಜನರೇ ಅವರಿಗೆ ಬುದ್ಧಿ ಕಲಿಸುತ್ತಾರೆ. ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಅವರು ಮಾತನಾಡಿದ್ದಾರೆ. ಅವರು ಏನು ಮಾಡಿದ್ದಾರೆ ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಸಹಿತ ದಾಖಲೆಗಳಿವೆ. ನಾನು ಮಾಡಿರುವ ಅಭಿವೃದ್ಧಿ ಕೆಲಸಗಳು ನನ್ನ ಗೆಲುವಿಗೆ ಶ್ರೀ ರಕ್ಷೆಯಾಗಲಿವೆ. ಕದ್ದು ಮುಚ್ಚಿ ನಾನು ಏನೂ ಮಾಡಿಲ್ಲ. ಜನರ ತೀರ್ಮಾನಕ್ಕೆ ತಲೆ ಬಾಗುವೆ ಎಂದು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯ ನಂತರ ಪತ್ರಕರ್ತರಿಗೆ ಶಾಸಕ ಎಸ್.ವಿ.ರಾಮಚಂದ್ರ ಪ್ರತಿಕ್ರಿಯೆ ನೀಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!