ಸುದ್ದಿವಿಜಯ, ಜಗಳೂರು: ಮಳೆ ಬಾರದೇ ಕಂಗಾಲಾಗಿರುವ ರೈತರಿಗೆ ಬೆಸ್ಕಾಂ ಅಧಿಕಾರಿಗಳು ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಪಂಪ್‍ಸೆಟ್‍ಗಳಿಗೆ ನಿರಂತರ ಏಳು ಗಂಟೆ ವಿದ್ಯುತ್ ಪೂರೈಸಬೇಕು. ಆದರೆ ಮೂರು ತಾಸು ಕೊಡದೇ ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ ಎಂದು ಬುಧವಾರ ಅರಿಶಿಣಗುಂಡಿ ಗ್ರಾಮದ ನೂರಾರು ರೈತರು ಬೆಸ್ಕಾಂ ಕಚೇರಿಗೆ ಮುತ್ತಿಗೆಹಾಕಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಮಳೆ ಕೈಕೊಟ್ಟಿದ್ದರಿಂದ ರೈತರು ಕಂಗಾಗಲಾಗಿದ್ದೇವೆ. ಹಾಕಿದ ಬಂಡವಾಳವೂ ಬರದೇ ಸಂಕಷ್ಟದಲ್ಲಿದ್ದೇವೆ. ನೀರಾವರಿ ಬೆಳೆಗಳನ್ನು ಉಳಿಸಿಕೊಳ್ಳಲು ರಾತ್ರಿ ಹಗಲು ಕಷ್ಟಪಡುತ್ತಿದ್ದೇವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಬೆಸ್ಕಾಂ ಅಧಿಕಾರಿಗಳು ಬೇಕಾಬಿಟ್ಟಿ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ತಾಂತ್ರಿಕ ಕಾರ್ಯಗಳ ನೆಪವೊಡ್ಡಿ ಗಂಟೆಗಟ್ಟಲೆ ವಿದ್ಯುತ್ ಕಡಿತಗೊಳಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಿಂಗಳಿಗೆ ವೇತನ ಪಡೆಯುವ ಅಧಿಕಾರಿಗಳು ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ವಿದ್ಯುತ್ ಪೂರೈಕೆ ಮಾಡದೇ ರೈತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ದೂರವಾಣಿ ಕರೆ ಮಾಡಿದರೆ ಸ್ವಿಚ್‍ಆಫ್ ಮಾಡಿಕೊಳ್ಳುತ್ತಾರೆ. ಟಿಸಿಗಳು ಸುಟ್ಟರೂ ಕೊಡದೇ ಅಧಿಕಾರಿಗಳು ಸತಾಯಿಸುತ್ತಾರೆ.ಜಗಳೂರು ಪಟ್ಟಣದ ಬೆಸ್ಕಾಂ ಕಚೇರಿಗೆ ತಾಲೂಕಿನ ಅರಿಶಿಣಗುಂಡಿ ಗ್ರಾಮದ ರೈತರು ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಹೊಸ ಟಿಸಿ ಕೊಡಲು ಅಧಿಕಾರಿಗಳು, ಲೈನ್‍ಮನ್‍ಗಳು ಲಂಚ ಕೇಳುತ್ತಾರೆ. ಕೊಡದೇ ಇದ್ದರೆ ರೈತರನ್ನು ಅಲೆದಾಡಿಸುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಎಇಇ ಸುಧಾಮಣಿ ಮತ್ತು ಎಸ್‍ಓ ರಂಗನಾಥ್ ಹಾಗೂ ಲೈನ್‍ಮನ್ ರುದ್ರೇಗೌಡ ವಿರುದ್ಧ ಧಿಕ್ಕಾರ ಕೂಗಿದರು. ಸರಿಯಾಗಿ ಕೆಲಸ ಮಾಡದೇ ಇರುವ ಲೈನ್‍ಮನ್ ರುದ್ರೇಗೌಡರನ್ನು ತಕ್ಷಣವೇ ಅಮಾನತು ಮಾಡಿ ಇಲ್ಲವೇ ವರ್ಗಾವಣೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಿಎಸ್‍ಐ ಎಸ್.ಡಿ.ಸಾಗರ್ ರೈತರನ್ನು ಸಮಾಧಾಪಡಿಸಿದರು.
ರೈತರಾದ ಬಸವರಾಜ್, ಹನುಮಂತಗೌಡ್ರು, ಎನ್‍ಸಿ ಮಂಜುನಾಥ್, ಲೋಕೇಶಪ್ಪ, ರಾಜಣ್ಣ, ಬಸವರಾಜ್, ಸಿದ್ದೇಶ್, ಭೀಮರಾಜ್, ಅಜ್ಜಯ್ಯ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.