ಸುದ್ದಿವಿಜಯ, ಜಗಳೂರು:ವೇಗದ ಆಧುನಿಕ ಜಗತ್ತಿನಲ್ಲಿ ಎಲ್ಲ ಸಂಪತ್ತು, ಐಶ್ವರ್ಯಕ್ಕಂತಲೂ ಆರೋಗ್ಯವೇ ಭಾಗ್ಯ ಎಂಬ ಸತ್ಯ ಎಲ್ಲರಿಗೂ ಈಗ ಅರ್ಥವಾಗಿದೆ ಎಂದು ಆರೈಕೆ ಆಸ್ಪತ್ರೆ ಮುಖ್ಯಸ್ಥ ಹಾಗೂ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಟಿ.ಜಿ.ರವಿಕುಮಾರ್ ಹೇಳಿದರು.
ತಾಲೂಕಿನ ಪಲ್ಲಾಗಟ್ಟೆ ಗ್ರಾಮಲ್ಲಿ ಮಂಗಳವಾರ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪ್ರೀತಿ ಆರೈಕೆ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೆಲಸದ ಒತ್ತಡ, ಸಮಯದ ಅಭಾವ ಮತ್ತು ಆಸ್ಪತ್ರೆಗಳ ಅಲಭ್ಯತೆ ಕಾರಣದಿಂದ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಆದರೆ, ಇದರಿಂದಾಗಿ ಅನಿರೀಕ್ಷಿತವಾಗಿ ದೊಡ್ಡ ಅಪಾಯಗಳು ಎದುರಾಗುವ ಸಂಭವೂ ಹೆಚ್ಚಿರುತ್ತದೆ.
ಇದರ ಭಾಗವಾಗಿಯೇ ಇತ್ತೀಚಿಗೆ ಹೃದಯಾಘಾತ, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್‌ನಂತ ಸಂಕಷ್ಟಗಳು ಎದುರಾಗುತ್ತಿವೆ ಎಂದರು.
ಸಂತೋಷಕರ ಜೀವನಕ್ಕೆ ಆರೋಗ್ಯವಂತ ದೇಹ ಮತ್ತು ಮನಸ್ಸು ಮುಖ್ಯವಾಗುತ್ತದೆ. ಹಾಗಾಗಿ, ದೈನಂದಿನ ಕ್ರಮದಲ್ಲಿ ಉತ್ತಮ ಹವ್ಯಾಸ, ಆಹಾರ ಪದ್ಧತಿ, ಯೋಗ, ಧ್ಯಾನಗಳನ್ನು ರೂಢಿಸಿಕೊಳ್ಳಬೇಕು. ಜತೆಗೆ ಕರುಣೆ, ಸ್ನೇಹ, ಪರೋಪಕಾರ, ಪ್ರೀತಿಯೆಂಬ ಭಾವನೆಗಳನ್ನು ಮನಸ್ಸನ್ನು ಸದಾ ಆರೋಗ್ಯವಾಗಿ ಇರಿಸುತ್ತವೆ ಎಂದು ಹೇಳಿದರು.
ಈ ವೇಳೆ 400ಕ್ಕೂ ಹೆಚ್ಚು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.
ಪಲ್ಲಾಗಟ್ಟೆಯ ವಿನಾಯಕ ಹಾಗೂ ಬಸವೇಶ್ವರ ಯುವಕರ ಸಂಘದ ವತಿಯಿಂದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿರುವ ಆವಣರದಲ್ಲಿಯೇ ತಪಾಸಣೆ ಶಿಬಿರ ನಡೆದಿದ್ದು ವಿಶೇಷವಾಗಿತ್ತು. ಗ್ರಾಮದ ಹಲವು ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು.
ಶಿಬಿರದಲ್ಲಿ ಜಗಳೂರಿನ ಮಾಜಿ ಶಾಸಕರಾದ ಗುರುಸಿದ್ಧನಗೌಡ, ವೈದ್ಯರಾದ ಶಾಹಿದ್, ಉದ್ಯಮಿಗಳಾದ ನಾಗರಾಜ ಸ್ವಾಮಿ, ಟ್ರಸ್ಟ್ ಸಿಬ್ಬಂದಿಗಳಾದ ನುಂಕೇಶ್, ಪವನ್ ಶೇಪೂರ್, ಶ್ವೇತಾ, ಗೌರಿ, ವಿಜಯ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ವೈದ್ಯ ರವಿಕುಮಾರ್ ಕಾರ್ಯಕ್ಕೆ ಮೆಚ್ಚುಗೆ
ಹಬ್ಬದ ಸಂದರ್ಭದಲ್ಲಿಯೂ ಗ್ರಾಮೀಣ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ಪ್ರೀತಿ ಆರೈಕೆ ಟ್ರಸ್ಟ್ ಉಚಿತವಾಗಿ ಆರೋಗ್ಯ ತಪಾಸಣೆ ಮಾಡುವ ಮೂಲಕ ಸಮಾಜಮುಖಿಯಾದ ಕೆಲಸ ಮಾಡಿದೆ. ಈ ಮೂಲಕ ಜನಸೇವೆಯೆ ಜನಾರ್ಧನನ ಸೇವೆ ಎಂಬುದನ್ನು ನಿರೂಪಿಸಿದೆ ಎಂದು ಸರ್ವರಿಂದಲೂ ಮೆಚ್ಚುಗೆ ವ್ಯಕ್ತವಾಯಿತು.