ಸುದ್ದಿವಿಜಯ,ಜಗಳೂರು:ಅಸ್ಪೃಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕ ಜಗಜೀವನ ರಾಮ್ ಎಂದು ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ ಹೇಳಿದರು.
ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಗುರುವಾರ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಾದ್ಯಂತ ಬಾಬುಜಿ ಎಂದೇ ಕರೆಯಲ್ಪಡುವ ಜಗಜೀವನ ರಾಮ್ ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ ಹಾಗೂ ಅತ್ಯುತ್ತ್ತಮ ಸಂಸದೀಯ ಪಟುವಾಗಿದ್ದರು.
ಬಾಬು ಜಗಜೀವನ ರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಮತ್ತು ಮೊದಲ ಉಪ ಪ್ರಧಾನಿಯಾಗಿ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು.
ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ರಾಜಕಾರಣದಲ್ಲಿ ಬಾಬು ಜಗಜೀವನರಾಮ್ ಪಾತ್ರ ಪ್ರಮುಖವಾದದ್ದು.
ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯ ಎಂಬ ಮನೋಭಾವಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು ಅನೇಕರು.
ಆದರೆ ಅವರ ಏಳಿಗೆಗೆ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟ ರೂಪ ಕೊಟ್ಟ ಕೆಲವೇ ಕೆಲವು ನಾಯಕರಲ್ಲಿ ಬಾಬು ಜಗಜೀವನ ರಾಮ್ ಒಬ್ಬರು ಎಂದು ಬಣ್ಣಿಸಿದರು.
ಆತನು ತನ್ನ ಜೀವಿತದಲ್ಲಿ ಅನುಭವಿಸಿ ಅಪಮಾನ, ನಿಂದನೆಗಳಿಂದ ಬೇಸತ್ತು ಮೌನವಾಗಿ ಇದ್ದಿದ್ದರೇ ಹಸಿದರಿಗೆ ಅನ್ನ ನೀಡಲು ಸಾಧ್ಯವಾಗುತ್ತಿಲಿಲ್ಲ, ಅಸ್ಪೃಶ್ಯತೆಯನ್ನು ದೂರ ಮಾಡಲು ಆಗುತ್ತಿರಲಿಲ್ಲ.
ಇಂತಹ ಮಹಾನ್ ನಾಯಕರ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಂಗಾಪುರ ಹನುಮಂತಪ್ಪ, ರಾಮಣ್ಣ, ಸಿಬ್ಬಂದಿಗಳಾದ ಉಮೇಶ್, ಮಂಜುನಾಥ್, ಗಿರೀಶ್, ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರಿದ್ದರು.