suddivijayanews29/082024
ಸುದ್ದಿವಿಜಯ, ಜಗಳೂರು: ಕೃಷಿ ಪಂಪ್ಸೆಟ್ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮೂಲಕ ಖಾಸಗೀಕರಣಗೊಳಿಸಿ ವಿದ್ಯುತ್ ಶುಲ್ಕ ವಿಧಿಸುವ ಸರಕಾರದ ನೀತಿಯನ್ನು ಖಂಡಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಗಳೂರು ಪಟ್ಟಣದ ದಾವಣಗೆರೆ ರಸ್ತೆಯ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆಯೂ ಹೊಸ ಬಸ್ ನಿಲ್ದಾಣ, ಡಾ. ರಾಜ್ಕುಮಾರ್ ರಸ್ತೆ ಮಹಾತ್ಮಗಾಂಧಿ ಹಳೆ ವೃತ್ತ ಮೂಲಕ ಬೆಸ್ಕಾಂ ಕಚೇರಿಗೆ ತೆರಳಿ ಸರ್ಕಾರಗಳು ಮತ್ತು ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.
ವಿವಿಧ ಸಮಸ್ಯೆಗಳಿಂದ ರೈತರು ಇಂದಿನ ದಿನಗಳಲ್ಲಿ ತುಂಬ ಸಂಕಷ್ಟದಲ್ಲಿ ಬದುತ್ತಿದ್ದಾರೆ. ಇಂತಹ ಪರಿಸ್ಥಿತಿ ನಡುವೆಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದೀಗ ರೈತರಿಗೆ ಸಂಬಂಧಿಸಿದ ಬೋರ್ವೆಲ್ಗಳಿಗೆ ಆರ್ ಆರ್ ನಂಬರ್ ನೀಡಿ ಅವುಗಳಿಗೆ ಆಧಾರ್ ನಂಬರ್ ಗಳನ್ನು ಜೋಡಣೆ ಮಾಡಿ ವಿದ್ಯುತ್ ಮೀಟರ್ ಗಳನ್ನು ಅಳವಡಿಸಿ ಶುಲ್ಕ ವಿಧಿಸುವ ಉದ್ದೇಶದಿಂದ ತ್ವರತಿಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಖಂಡನಿಯ ಎಂದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ ಹೊಳೆ ಚಿರಂಜೀವಿ ಮಾತನಾಡಿ, ಕೃಷಿ ಕೊಳವೆ ಬಾವಿಗಳಿಗೆ 2023ರಿಂದ ಟಿಸಿ ವಿದ್ಯುತ್ ಕಂಬ, ವೈರ್, ಇತರೆ ಸಾಮಾಗ್ರಿಗಳನ್ನು ಕೃಷಿಕರು ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ ವಿದ್ಯುತ್ ಸಂಪರ್ಕ ಪಡೆಯಬೇಕೆಂಬ ಕಾನೂನು ಜಾರಿಗೊಳಿಸಿದೆ.
ರಾಜ್ಯದಲ್ಲಿ ರೈತರು ಕೊಳವೆ ಬಾವಿಗಳನ್ನು ಆಶ್ರಯಿಸಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಆದರೆ ಸರ್ಕಾರಗಳು ರೈತರ ನೆರವಿಗೆ ಬರಬೇಕು. ಆದರೆ ಇಲ್ಲಿ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಆಪಾಧಿಸಿದರು.ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಿ. ದೇವೇಂದ್ರಪ್ಪ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ದೇಶದ ಬೆನ್ನೆಲುಬು ರೈತ ಅವರ ಪರವಾಗಿ ನಾವೂ ಮತ್ತು ಸರ್ಕಾರವಿರುತ್ತದೆ.
ಆಧಾರ್ ಜೋಡಣೆಯಿಂದ ತೊಂದರೆಯಾಗದಂತೆ ಕೃಷಿ ಸಚಿವರೊಂದಿಗೆ ಚರ್ಚಿಸಲಾಗುವುದು. ರೈತರು ಭಯಪಡುವುದು ಬೇಡ. ಈ ಯೋಜನೆಯ ಸಂಪೂರ್ಣ ಮಾಹಿತಿ ಪಡೆಯಲಾಗುವುದು ಎಂದರು.
ಈ ಸಂಧರ್ಭದಲ್ಲಿ ಸಂಘದ ತಾಲೂಕು ಕಾರ್ಯದರ್ಶಿ ಬೈರನಾಯಕನಹಳ್ಳಿ ರಾಜು, ರೈತ ಸಂಘದ ತಾ. ಗೌರವಾಧ್ಯಕ್ಷ ಪಿ. ಗಂಗಾಧರಪ್ಪ, ಜಿಲ್ಲಾ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್ ಸೇರಿದಂತೆ ಮತ್ತಿತರರಿದ್ದರು.