ಸುದ್ದಿ ವಿಜಯ,ಜಗಳೂರು: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರವಾಗಿದ್ದು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಒಂಬುಡ್ಸ್‍ಮನ್ ಕಾರ್ಯಾಲಯಕ್ಕೆ ಗ್ರಾಮದ ಟಿ.ನಾಗರಾಜ್ ಎಂಬುವರು ದೂರು ನೀಡಿದ್ದರು. ದೂರು ಆಧರಿಸಿ ಗುರುವಾರ ದಾವಣಗೆರೆ ಪ್ರಭಾರಿ ಓಂಬುಡ್ಸ್‍ಮನ್ ಮೊಹಮದ್ ಮುಬೀನ್ ಭೇಟಿ ನೀಡಿ ಪರಿಶೀಲಿಸಿದರು.
ಬಿಸ್ತುವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ 16 ಕಾಮಗಾರಿಗಳಲ್ಲಿ ಬೇರೆ ಬೇರೆ ಗ್ರಾಮಗಳಿಂದ ಕೂಲಿ ಕಾರ್ಮಿಕರನ್ನು ಕರೆಸಿ ಕಾಮಗಾರಿ ಮಾಡಿದ್ದಾರೆ. ಇನ್ನು ಕೆಲ ಕಾಮಗಾರಿಗಳನ್ನು ಜೆಸಿಬಿ ಮೂಲಕ ಮಾಡಿಸಿದ್ದಾರೆ ಎಂದು ದೂರು ನೀಡಿದ್ದರು. ಖುದ್ದು ಸ್ಥಳಕ್ಕೆ ಭೇಟಿ ನೀಡಿದ ಮೊಹಮದ್ ಮುಬೀನ್ ಅವರು ದಾಖಲೆಗಳನ್ನು ಪರಿಶೀಲಿಸಿದ ನಂತರ 16 ಕಾಮಗಾರಿಗಳ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುವುದಾಗಿ ಭರಮವಸೆ ನೀಡಿದರು.
ದೂರಿನಲ್ಲಿ ಏನಿದೆ?
ಬಿಸ್ತುವಳ್ಳಿ ಗ್ರಾಮದಲ್ಲಿ 2020-21 ಮತ್ತು 2021-22ನೇ ಸಾಲಿನ ವಿವಿಧ ಕಡೆ 16 ಕಾಮಗಾರಿಗಳನ್ನು ಜೆಸಿಬಿ ಯಂತ್ರಗಳನ್ನು ಬಳಸಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. 37 ಜಾನ್ ಕಾರ್ಡ್‍ಗಳಿಂದ ಕಾಮಗಾರಿ ಪೂರೈಸಲಾಗಿದೆ. ಆದರೆ ಕೆಲ ಕಾಮಗಾರಿಗಳಿಗೆ ಈ ಗ್ರಾಮದ ಕೂಲಿಕಾರ್ಮಿಕರನ್ನು ಬಳಕೆ ಮಾಡಿಕೊಳ್ಳದೇ ಅವರಿಗೆ ಬೇಕಾದ ಕೂಲಿಕಾರ್ಮಿಕರನ್ನು ಕರೆಸಿ ಕೆಲಸ ಮಾಡಲಾಗಿದೆ. ಈ ಬಗ್ಗೆ ಕೇಳಿದರೆ ಬೆದರಿಕೆ ಹಾಕುತ್ತಾರೆ ಎಂದು ಟಿ.ನಾಗರಾಜ್ ದೂರಿದ್ದರು. 16 ಕಾಮಗಾರಿಗಳ ಅನುಷ್ಠಾನ ಮತ್ತು ಕೂಲಿ ಹಣದಲ್ಲಿ ಅಕ್ರಮವಾಗಿದ್ದು ಸಂಪೂರ್ಣ ದಾಖಲೆಗಳನ್ನು ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಒಂಬುಡ್ಸ್‍ಮನ್ ಏನು ಹೇಳಿದರು?
ಈವೇಳೆ ಪಂಚಾಯಿತಿ ಕಾರ್ಯಾಲಯದಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಒಂಬುಡ್ಸ್‍ಮನ್‍ಮೊಹಮದ್ ಮುಬೀನ್, ಅಕ್ರಮವಾಗಿದ್ದರೆ ಜಾಬ್ ಕಾರ್ಡ್ ಹೊಂದಿರುವ ಕುಂಟುಂಬದವರನ್ನು ಕರೆಸಿ ಬ್ಯಾಂಕ್‍ಪಾಸ್ ಬುಕ್ ಪರಿಶೀಲಿಸಿ ಒಂದೊಂದು ಕಾಮಗಾರಿಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಪ್ರತಿ ಕಾಮಗಾರಿ ವೀಕ್ಷಣೆ ಮಾಡಲು ಸಮಯ ನಿಗದಿ ಪಡಿಸಿ ನಂತರ ಪರಿಶೀಲಿಸುತ್ತೇನೆ. ಕೂಲಿ ಕಾರ್ಮಿಕರಿಂದಲೂ ಹೇಳಿಕೆ ಪಡೆದು ಮಾಹಿತಿ ಪಡೆಯುತ್ತೇನೆ. ತಕ್ಷಣವೇ ಎಲ್ಲವನ್ನೂ ಪರಿಶೀಲಿಸಲು ಸಾಧ್ಯವಿಲ್ಲ. ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಫೋಟೋ ಮತ್ತು ತಾಂತ್ರಿಕ ದಾಖಲೆಗಳ ಬಗ್ಗೆ ಅವಲೋಕ ನಡೆಸಿ ಸಂಬಂಧ ಪಟ್ಟ ಇಲಾಖೆಗೆ ವರದಿ ಸಲ್ಲಿಸುತ್ತೇನೆ ಎಂದು ದೂರುದಾರರಿಗೆ ಭರಮಸೆ ನೀಡಿದರು. ಈವೇಳೆ ಬಿಸ್ತುವಳ್ಳಿ ಗ್ರಾಮದಲ್ಲಿ ಎನ್‍ಆರ್‍ಇಜಿ ಕಾಮಗಾರಿಗಳ ಪ್ರದೇಶಕ್ಕೆ ಭೇಟಿ ನೀಡಿ ದಾಖಲೆ, ಫೋಟೋಗಳನ್ನು ಪರಿಶೀಲನೆ ನಡೆಸಿದರು.
ಈ ವೇಳೆ ತಾಲೂಕು ನರೇಗಾ ಸಹಾಯಕ ನಿರ್ದೇಶಕ ವೈ.ಎಚ್.ಚಂದ್ರಶೇಖರ್, ನರೇಗಾ ತಾಂತ್ರಿಕ ಸಂಯೋಜಕರಾದ ವೀರೇಂದ್ರಪಾಟೀಲ್, ಬಿಜೆಪಿ ಮುಖಂಡ, ಪಿಎಸಿಎಸ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಪಿಡಿಒ ಎಚ್.ಎಸ್.ಕೊಟ್ರೇಶ್, ಸದಸ್ಯರಾದ ಶಂಭುಲಿಂಗಪ್ಪ, ಗೊಲ್ಲರಹಟ್ಟಿ ಚಿತ್ತಪ್ಪ, ಅಂಜಿನಪ್ಪ, ರತ್ನಮ್ಮ ಆನಂದಪ್ಪ, ಶೋಭಾಮೋಹನ್‍ಆನಂದ್, ಕೃಷ್ಣಪ್ಪ, ಹನುಮಜ್ಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ದೂರಿನಲ್ಲಿ ಸತ್ಯಾಂಶವಿಲ್ಲ:
ಮಹಾತ್ಮಾಗಾಂಧೀ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಕೂಲಿಕಾರ್ಮಿಕರಿಂದಲೇ ಕಾಮಗಾರಿ ಪೂರ್ಣ ಮಾಡಲಾಗಿದೆ. ಅವರವರ ಖಾತೆಗೆ ಹಣ ಜಮೆಯಾಗಿದೆ. ಉದ್ದೇಶ ಪೂರ್ವಕವಾಗಿ ಒಂಬುಡ್ಸ್‍ಮನ್ ಕಾರ್ಯಾಲಯಕ್ಕೆ ದೂರುನೀಡಲಾಗಿದೆ. ಒಂಬುಡ್ಸ್‍ಮನ್ ಮೊಹಮದ್ ಮುಬೀನ್ ಅವರ ಮೇಲೆ ಭರವಸೆಯಿದೆ. ಅವರು ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಲಿ. ಆಗ ಸತ್ಯಾಂಶ ಹೊರ ಬರಲಿದೆ.
ಬಿಸ್ತುವಳ್ಳಿ ಬಾಬು, ವಿಎಸ್‍ಎಸ್‍ಎನ್‍ಅಧ್ಯಕ್ಷರು.