ಸುದ್ದಿವಿಜಯ, ಜಗಳೂರು: ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಸ್ಥಳೀಯ ಆಡಳಿತದ ಒಪ್ಪಿಗೆ ಇಲ್ಲದೇ ಕಾನೂನು ಮೀರಿ ನಿರ್ಮಾಣ ಮಾಡಲು ಹೊರಟಿದ್ದ ‘ಕ್ಲೀನ್ ಮ್ಯಾಕ್ಸ್’ ಕಂಪನಿಯ ಪವನ ವಿದ್ಯುತ್ ಸ್ಥಾವರಕ್ಕೆ ಬುಧವಾರ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಭೇಟಿ ನೀಡಿ, ಪಿಡಿಒ ಮೂಲಕ ಕಂಪನಿಗೆ ನೊಟಿಸ್ ಕೊಟ್ಟಿದ್ದಾರೆ.
ತಾಲೂಕಿನ ಗಡಿ ಗ್ರಾಪಂ ಹಿರೇಮಲ್ಲನಹೊಳೆ ಗ್ರಾಮದ ಸ.ನಂ 34ರಲ್ಲಿ ಕ್ಲೀನ್ ಮ್ಯಾಕ್ಸ್ ವಿಂಡ್ ಫ್ಯಾನ್ ಕಂಪನಿ ಅಳವಡಿಸುತ್ತಿರುವ ಪವನ ಶಕ್ತಿ ಸ್ಥಾವರ ಅಳವಡಿಕೆಗೆ ಸಂಬಂಧಪಟ್ಟ ಇಲಾಖೆಗಳ ಮತ್ತು ಸ್ಥಳೀಯ ಗ್ರಾಪಂನ ಅನುಮತಿ ಪಡೆಯದೇ ಕಾಮಗಾರಿ ಆರಂಬಿಸಿ ಕಾನೂನು ಮುರಿದಿದ್ದರು.
ಹೀಗಾಗಿ ಸ್ಥಳೀಯ ರೈತರು ಬುಧವಾರ ಬೆಳಿಗ್ಗೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವಿಷಯ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಅವರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಾನೂನು ಮೀರಿ ಕಾಮಗಾರಿ ಆರಂಭಿಸಿದ ಕ್ಲೀನ್ ಮ್ಯಾಕ್ಸ್ ಕಂಪನಿಗೆ ಸ್ಥಳೀಯ ಆಡಳಿತ ನೋಟಿಸ್ ನೀಡಿ ಎಂದು ತಹಶೀಲ್ದಾರ್ ಪಿಡಿಒ ಡಿ.ಎನ್.ಅರವಿಂದ್‍ಗೆ ಸೂಚನೆ ನೀಡಿದರು.
ತಕ್ಷಣ ಹಿರೇಮಲ್ಲನಹೊಳೆ ಗ್ರಾಪಂ ಪಿಡಿಒ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ನೊಟಿಸ್ ಕೊಟ್ಟು ಕಾಮಗಾರಿ ಸ್ಥಗಿತಕ್ಕೆ ಸೂಚನೆ ನೀಡಿದರು.ಈ ವೇಳೆ ಕಂದಾಯಾಧಿಕಾರಿ ಧನಂಜಯ, ರೈತರಾದ ಬಿ.ಆರ್.ಬಾಣೇಶ್, ಕೆ.ಸಿ.ಬಸವರಾಜ್, ಎಚ್.ಅಮರೇಂದ್ರ, ವಿ.ಕೃಷ್ಣಮೂರ್ತಿ, ರಘು ಜಾಗ್ವಾರ್, ವಿ.ಗುರುಲಿಂಗಪ್ಪ ಸೇರಿದಂತೆ ಹಿರೇಮಲ್ಲನಹೊಳೆ ಮತ್ತು ಹಾಲೇಹಳ್ಳಿ ಗ್ರಾಮಸ್ಥರು.