ಸುದ್ದಿವಿಜಯ, ಜಗಳೂರು: ತಾಲೂಕಿನ ಕಲ್ಲೇದೇವರಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಂದ ಉತ್ತಮ ಆರೋಗ್ಯ ಸೇವೆ ಲಭಿಸುತ್ತಿಲ್ಲವೆಂದು ಆರೋಪಿಸಿ ಗುರುವಾರ ಗ್ರಾಮಸ್ಥರು ಪ್ರತಿಭಟಿಸಿ ತಹಸೀಲ್ದಾರ್ ಸೈಯದ್ ಕಲಿಂ ಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಬೆಣ್ಣೆಹಳ್ಳಿ ಗ್ರಾಮದ ಮುಖಂಡ ನಿಜಲಿಂಗಪ್ಪ ಮಾತನಾಡಿ, ಕಲ್ಲೇದೇವರಪುರ ಗ್ರಾಮದಿಂದ ಒಂದು ಕಿ.ಮೀ ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುತ್ತಮುತ್ತಲಿನ ಜನರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯರಿದ್ದರು ರೋಗಿಗಳನ್ನು ನೋಡದೆ ನರ್ಸ್ಗಳ ಬಳಿ ಕಳಿಸುತ್ತಾರೆ.
ಇದರಿಂದ ರೋಗಿಗಳಿಗೆ ತುಂಬ ತೊಂದರೆಯಾಗುತ್ತಿದ್ದು, ತಾಲೂಕು ಆರೋಗ್ಯಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಉತ್ತಮ ಸೇವೆ ಒದಗಿಸಬೇಕು ಇಲ್ಲದಿದ್ದರೆ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮದಿಂದ ಹೊರಭಾಗದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಹೇಳುವರು, ಕೇಳುವವರು ಯಾರು ಇಲ್ಲದಂತಾಗಿದೆ. ವೈದ್ಯರು ಯಾವಾಗ ಬಂದು ಹೋಗುತ್ತಾರೆಂಬುವುದು ಗೊತ್ತಾಗುವುದಿಲ್ಲ. ಇವರ ಸಣ್ಣ ನಿರ್ಲಕ್ಷದಿಂದ ರೋಗಿಗಳು ತೊಂದರೆ ಅನುಭವಿಸಿದ್ದಾರೆ.
ತಕ್ಷಣವೇ ಜಗಳೂರಿನ ಸರಕಾರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೆಕು. ಸರಕಾರಿ ವೈದ್ಯರಿಗೆ ಉತ್ತಮವಾದ ವೇತನ ನೀಡಿದರು ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ಹಿಂದೇಟು ಹಾಕುತ್ತಾರೆ ಎಂದು ಗ್ರಾಮಸ್ಥರು ದೂರಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ವಸಂತಕುಮಾರಿ, ಉಪಾಧ್ಯಕೆ ಅನೂಸುಯ, ಸದಸ್ಯರಾದ ನಿಜಲಿಂಗಪ್ಪ, ಚನ್ನಕೇಶವ, ಅಜ್ಜಯ್ಯ, ಶಿವಣ್ಣ, ಶೃತಿ, ವಿಮಲಾಕ್ಷೀ, ಚಂದ್ರಮ್ಮ, ನಾಗಮ್ಮ, ಮಧುಬಾಲ, ಬಡಯ್ಯ, ಮುಖಂಡರಾದ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರಿದ್ದರು.