suddivijayanews17/08/2024
ಸುದ್ದಿವಿಜಯ, ಜಗಳೂರು: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ‘ಅಭಯ’ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರ ಸಮೂಹ ಮಹಾತ್ಮ ಗಾಂಧಿ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಜಾಥಾ ನಡೆಸಿ ಶನಿವಾರ ತಹಶೀಲ್ದಾರ್ ಸೈಯದ್ ಕಲೀಂಉಲ್ಲಾಗೆ ಮನವಿ ಸಲ್ಲಿಸಿದರು.
ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆ ಹೊರ ರೋಗಿಗಳ ವಿಭಾಗ (ಒಪಿಡಿ)ದ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರಿಂದ ನೂರಾರು ಸಂಖ್ಯೆಯಲ್ಲಿ ಆಸ್ಪತ್ರೆಗೆ ಬಂದಿದ್ದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಷಣ್ಮುಖ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ದುಷ್ಕರ್ಮಿಗಳ ಗುಂಪು ಎಂ.ಜಿ.ಕರ್ ವೈದ್ಯಾಕೀಯ ಕಾಲೇಜು ಆಸ್ಪತ್ರೆಗೆ ನುಗ್ಗಿದ್ದಾರೆ. ವೈದ್ಯರಿಗೆ ಸುರಕ್ಷಿತ ಕೆಲಸದ ವಾತಾವರಣ ಸೃಷ್ಟಿಸಲಾಗದ ಸ್ಥಿತಿಯಲ್ಲಿ ಪಶ್ಚಿಮ ಬಂಗಾಳ ಸರಕಾರವಿದೆ. 1012ರ ನಿರ್ಭಯ ಪ್ರಕರಣದಂತೆ ಈ ಕೃತ್ಯ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಿರಿಯ ವೈದ್ಯರಾದ ಡಾ.ಶಿವಪ್ರಕಾಶ್, ವೈದ್ಯರು ಅಂದರೆ ದೇವರು ಅನ್ನುತ್ತಾರೆ. ಆದರೆ ನಾವು ದೇವರಲ್ಲದಿದ್ದರೂ ರೋಗಿಗಳ ಜೀವ ಉಳಿಸುವ ಕೆಲಸ ಮಾಡುತ್ತಿದ್ದೇವೆ. ಅಂತಹ ವೈದ್ಯಯ ಮೇಲೆ ಅತ್ಯಾಚಾರವೆಸಗಿ ಭೀಕರವಾಗಿ ಕೊಲೆ ಮಾಡಿರುವುದು ಖಂಡನೀಯ. ಆರೋಪಿಗಳನ್ನು ಗಲ್ಲು ಶಿಕ್ಷಿಗೆ ಗುರಿಪಡಿಸಬೇಕು. ಅಭಯಳಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತೆಗೆದುಕೊಂಡ ತೀರ್ಮಾನದಿಂದ 24 ಗಂಟೆಗಳ ಕಾಲ ಪ್ರತಿಭಟನೆ ಮಾಡಲು ತೀರ್ಮಾಣ ಕೈಗೊಂಡಿದ್ದೇವೆ. ತೀವ್ರ ತುರ್ತು ಪರಿಸ್ಥಿತಿಯ ರೋಗಿಗಳನ್ನಷ್ಟೇ ಪರೀಕ್ಷಿಸುತ್ತಿದ್ದೇವೆ. ಉಳಿದಂತೆ ಒಪಿಡಿ ರೋಗಿಗಳನ್ನು ಪರೀಕ್ಷಿಸದೇ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಹಿರಿಯ ವೈದ್ಯರಾದ ಡಾ.ಶಿವಪ್ರಕಾಶ್, ಡಾ.ಮಹೇಶ್, ಡಾ.ಶಂಕರಪ್ಪ, ಡಾ.ಹಾಲಸ್ವಾಮಿ ಕಂಬಾಳಿ ಮಠ್, ಡಾ.ಜಯಕುಮಾರ್, ಡಾ.ಅನಿವೃದ್ಧಿ, ಡಾ.ಅರ್ಪಿತಾ ಸೇರಿದಂತೆ ಅನೇಕ ವೈದ್ಯರು ಮತ್ತು ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.