ಸುದ್ದಿವಿಜಯ, ಜಗಳೂರು: ವರಮಹಾಲಕ್ಷ್ಮಿ ಬಾಗೀನ ಅರ್ಪಿಸುವ ಕಾರ್ಯಕ್ರಮಕ್ಕೆ ಪ್ರಭಾ ಮಲ್ಲಿಕಾರ್ಜುನ್ ಶುಕ್ರವಾರ ಜಗಳೂರು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು, ಮುಖಂಡರಲ್ಲಿ ಸಂಭ್ರಮ ಮನೆ ಮಾಡಿತ್ತು.
ಚುನಾವಣೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗ ಡಾ.ಪ್ರಭಾ ಮಲ್ಲಿಕಾರ್ಜುನ್ ಆಗಮಿಸುವ ಸುದ್ದಿ ಕೇಳಿ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಅರಸಿಕೆರೆ ಮತ್ತು ಜಗಳೂರು ಭಾಗದಿಂದ ಆಗಮಿಸಿದ್ದು ವಿಶೇಷವಾಗಿತ್ತು.
ಜಗಳೂರು ಪಟ್ಟಣಕ್ಕೆ ಎಂಟ್ರಿಗೂ ಮುನ್ನ ಸುಮಾರು 25 ರಿಂದ 30 ಕಾರುಗಳಲ್ಲಿ ಜಗಳೂರು ಗಡಿ ಗ್ರಾಮವಾದ ಮುಗ್ಗಿದರಾಗಿ ಹಳ್ಳಿ ಗ್ರಾಮದಿಂದ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಸ್ವಾಗತಿಸಲು ಮುಖಂಡರು ತೆರಳಿದರು.ಮುಗ್ಗಿದರಾಗಿಹಳ್ಳಿ ಗ್ರಾಮದಿಂದ ಪಟ್ಟಣಕ್ಕೆ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಅದ್ಧೂರಿಯಾಗಿ ಕರೆತರಲಾಯಿತು. ಪಟ್ಟಣಕ್ಕೆ ಎಂಟ್ರಿಯಾಗುತ್ತಿದ್ದಂತೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅಲ್ಲಿಂದ ನೇರವಾಗಿ ಶಾಸಕರ ಜನ ಸಂಪರ್ಕ ಕಚೇರಿಗೆ ತೆರಳಿದ ಅವರು, ಪತ್ರಕರ್ತರೊಂದಿಗೆ ಮಾತನಾಡಿ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಸೂಚ್ಯವಾಗಿ ಹೇಳಿದರು.
ಅಷ್ಟರಲ್ಲಿ ಕಾರ್ಯಕರ್ತರಲ್ಲಿ ಗುಸು ಗುಸು ಸುದ್ದಿ ಹೊರ ಹೊಮ್ಮುತ್ತಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಡಾ.ಪ್ರಭಾ ಮಲ್ಲಿಕಾರ್ಜುನ್ ಚುನಾವಣೆಗೆ ನಿಲ್ಲುವುದು ಪಕ್ಕ ಎಂಬ ಮಾತುಗಳು ಕಾರ್ಯಕರ್ತರಿಂದ ಕೇಳಿ ಬಂದವು.
ಅಲ್ಲಿಂದ ನೇರವಾಗಿ ಶಾಸಕ ಬಿ.ದೇವೇಂದ್ರಪ್ಪ ಅವರ ನಿವಾಸಕ್ಕೆ ತೆರಳಿದ ಡಾ.ಪ್ರಭಾ ಮಲ್ಲಿಕಾರ್ಜುನ್ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರಿಗೆ ವರಮಹಾಲಕ್ಷ್ಮಿ ಬಾಗೀನ ಅರ್ಪಿಸಿ ಶುಭಾಶಯ ಕೋರಿದರು.
ಲೋಕಸಭಾ ಚುನಾವಣೆಗೆ ‘ನಾನು ಆಕಾಂಕ್ಷಿ, ನಾನೂ ಆಕಾಂಕ್ಷಿ’… ಎನ್ನುವ ಕಾರ್ಯಕರ್ತರು ಮುಖಂಡರಿಗೆ ವರಮಹಾಲಕ್ಷ್ಮೀ ಹಬ್ಬದ ಬಾಗೀನ ನೆಪದಲ್ಲಿ ಕಾಂಗ್ರೆಸ್ ಲೋಕಸಭೆಗೆ ರೆಡಿಯಾಗುತ್ತಿದೆ ಎನ್ನುವುದು ಈ ಕಾರ್ಯಕ್ರಮದ ಮೂಲಕ ಮೇಲ್ನೋಟಕ್ಕೆ ವ್ಯಕ್ತವಾಗುತ್ತಿತ್ತು.
ಒಟ್ಟಾರೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಲೋಕಸಭೆ ಚುನಾವಣೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗಲೇ ಈಶಾನ್ಯ ಮೂಲೆಯಾದ ಜಗಳೂರಿಗೆ ಬಂದಿರುವುದು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ದಟ್ಟವಾಗಿದೆ. ಅವರ ಸ್ಪರ್ಧೆ ಕುರಿತು ಕಾಂಗ್ರೆಸ್ ವರಿಷ್ಠರು ಮೇಲಾಗಿ ಕುಟುಂಬದ ಸಮ್ಮತಿ ಅಗತ್ಯವಾಗಿದ್ದು ಚುನಾವಣಾ ಸಮಯದಲ್ಲಿ ಏನಾಗುತ್ತೋ ಕಾದು ನೋಡಬೇಕು.