suddivijayanews4/6/2024
ಸುದ್ದಿವಿಜಯ,ಜಗಳೂರು: ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ವಿಜಯ ಸಾಧಿಸಿದ್ದಾರೆ.
ದಾವಣಗೆರೆ ಕ್ಷೇತ್ರದ ಪ್ರಜ್ಞಾವಂತ ಮತದಾರರು ವಿದ್ಯಾವಂತ, ಬುದ್ದಿವಂತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರು ಸಂಸತ್ ಪ್ರವೇಶಿಸುತ್ತಿರುವುದು ಖುಷಿಯ ವಿಚಾರವಾಗಿದೆ.ಡಾ.ಪ್ರಭಾ ಮಲ್ಲಿಕಾರ್ಜುನ್ ನೂತನ ಸಂಸದರಾಗುತ್ತಿದ್ದಂತೆ ಮಂಗಳವಾರ ಜಿಲ್ಲಾಧಿಕಾರಿಗಳಿಂದ ಗೆಲುವಿನ ಪ್ರಮಾಣ ಪತ್ರ ಸ್ವೀಕರಿಸಿದರು.
ಈ ವೇಳೆ ಪತಿ ಎಸ್.ಎಸ್.ಮಲ್ಲಿಕಾರ್ಜುನ್, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಚನ್ನಗಿರಿ ಶಾಸಕ ಬಸವರಾಜ್ ವಿ.ಶಿವಗಂಗಾ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದರು.
ಬೆಟ್ಟದಷ್ಟು ಸವಾಲು:
ನೂತನ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಬೆಟ್ಟದಷ್ಟು ಸವಾಲುಗಳಿವೆ. ಚುನಾವಣೆ ಪ್ರಚಾರದ ವೇಳೆ ಅವರು ವಿಧಾನ ಸಭಾ ಕ್ಷೇತ್ರವಾರು ಸಮಸ್ಯೆ ಬಗ್ಗೆ ಮಾಧ್ಯಮಗಳಲ್ಲಿ ವಿವರಿಸಿದ್ದರು.
ಅತ್ಯಂತ ಹಿಂದುಳಿದ ಜಗಳೂರು ಕ್ಷೇತ್ರದ ಅಭಿವೃದ್ಧಿಗೆ 57 ಕೆರೆ ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಮಹಿಳೆಯರಿಗೆ ಗಾರ್ಮೆಂಟ್ಸ್, ಆರೋಗ್ಯ ಮತ್ತು ಶಿಕ್ಷಣ, ಯುವ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವ ಭರವಸೆ ನೀಡಿದ್ದರು.
ವಿದ್ಯಾವಂತರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸಂಸದರಾದ ನಂತರ ಕೊಟ್ಟ ಭರವಸೆಗಳನ್ನು ಈಡೇರಿಸುವ ಮತ್ತು ಅಭಿವೃದ್ಧಿ ಪರವಾದ ದೂರದೃಷ್ಟಿ ಹೊಂದಿದ್ದು ಕ್ಷೇತ್ರದ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲಲಿದ್ದಾರೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಅಭಿಲಾಷೆಯಾಗಿದೆ.
ಈಗಾಗಲೇ ಕ್ಷೇತ್ರದಲ್ಲಿ ತ್ರಿಬಲ್ ಎಂಜಿನ್ ಶಕ್ತಿ ಬಂದಿದ್ದು ಭವಿಷ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.