ಸುದ್ದಿವಿಜಯ, ಜಗಳೂರು:ನ್ಯಾ.ಎ.ಜೆ.ಸದಾಶಿವ ಆಯೋಗದ ಅನುಸಾರ ಒಳ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸಿ ನ.18ರಂದು ಮಾದಿಗ ಮತ್ತು ಛಲವಾದಿ ಸಮುದಾಯದಿಂದ ಶಾಂತಿಯುತವಾಗಿ ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ದಸಂಸ ಸಂಚಾಲಕ ಮಲೆಮಾಚಿಕೆರೆ ಸತೀಶ್ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಮನವಿ ಕೇವಲ ತಾಲೂಕಿಗೆ ಸಮೀತವಾಗಿಲ್ಲ. ರಾಜ್ಯಾದ್ಯಂತ ಮಾದಿಗ ಸಮಾಜದ ರಾಜ್ಯ ಮುಖಡರು ಕರೆ ನೀಡಿದ್ದಾರೆ. ಹಾಗಾಗಿ ನಮ್ಮ ತಾಲೂಕಿನಲ್ಲಿ ಯಾವುದೇ ಪ್ರತಿಭಟನೆ, ಧರಣಿ ಇಲ್ಲದೇ ಸಾಂಕೇತಿಕವಾಗಿ ಶಾಸಕರಿಗೆ ಮನವಿ ನೀಡಿ ಬೆಂಬಲಿಸುವಂತೆ ಕೋರಿಕೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕ ಬಿ ದೇವೇಂದ್ರಪ್ಪ ನಮ್ಮ ಶೋಷಿತ ಪರವಾಗಿದ್ದು, ಡಿಸೆಂಬರ್ ನಲ್ಲಿ ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಒಳ ಮೀಸಲಾತಿ ಪರವಾಗಿ ಧ್ವನಿಯೆತ್ತಿ ಮಾತನಾಡಲಿದ್ದಾರೆ. ಹೀಗಾಗಿ ಸಮಾಜದ ನೋವಿಗೆ ಸ್ಪಂದಿಸುವ, ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಕ್ಷೇತ್ರದ ಶಾಸಕರ ನಿವಾಸಕ್ಕೆ ತೆರಳಿ ಮನವಿಯನ್ನು ಮಾಡಬೇಕಾಗಿರುವುದರಿಂದ ಮಾದಿಗ ಮತ್ತು ಛಲವಾದಿ ಸಮಾಜದ ಬಾಂಧವರೆಲ್ಲರೂ ಭಾಗವಹಿಸಬೇಕು.
ನ.18ರಂದು ಬೆಳಗ್ಗೆ ಪಟ್ಟಣದ ಪ್ರವಾಸಿ ಮಂದಿರದಿಂದ ಶಾಸಕರ ಜನ ಸಂಪರ್ಕ ಕಚೇರಿಯವರೆಗೂ ಮೆರವಣಿಗೆಯ ಮೂಲಕ ತೆರಳಿ ಮನವಿ ಮಾಡಲಾಗುವುದು ಎಂದರು.
ಶಾಸಕರಾದ ಬಿ.ದೇವೇಂದ್ರಪ್ಪ ನಿವಾಸಕ್ಕೆ ದಲಿತ ಸಂಘಟನೆಯಾಗಲಿ ಮತ್ತು ದಲಿತ ಮುಖಂಡರಾಗಲಿ ಮುತ್ತಿಗೆ ಹಾಕುವುದಿಲ್ಲ. ನಮ್ಮದೇನಿದ್ದರೂ ಶಾಂತಿಯುತ ಹೋರಾಟವಾಗಿದ್ದು, ನಮ್ಮ ಹಕ್ಕುಗಳಿಗಾಗಿ ಶಾಸಕರನ್ನು ಭೇಟಿ ಮಾಡಿ ಸದನದಲ್ಲಿ ಆಯೋಗದ ವರದಿ ಜಾರಿ ಬಗ್ಗೆ ಚರ್ಚಿಸಿ ಎಂದು ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.