ಸುದ್ದಿವಿಜಯ, ಜಗಳೂರು: ಪಟ್ಟಣದ 17ನೇ ವಾರ್ಡ್‍ನ ತುಮಾಟಿ ಲೇಔಟ್‍ನ 1 ಮತ್ತು 2ನೇ ಅಡ್ಡರಸ್ತೆಯಲ್ಲಿ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅನೇಕ ಬಾರಿ ಪಪಂಗೆ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಹೀಗಾಗಿ ಚುನಾವಣೆ ಬಹಿಷ್ಕರ ಮಾಡುವುದಾಗಿ ತುಮಾಟಿ ಲೇಔಟ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಅವರಿಗೆ ದೂರು ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಶನಿವಾರ ಭೇಟಿ ನೀಡಿದ ನಿವಾಸಿಗಳು ತುಮಾಟಿ ಲೇಔಟ್ ನಿರ್ಮಾಣವಾಗಿ 25 ವರ್ಷಗಳಾದರೂ ಇದುವರೆಗೂ ಚರಂಡಿ ನಿರ್ಮಾಣವಾಗಿಲ್ಲ.
ಸೊಳ್ಳೆಗಳ ಕಾಟಕ್ಕೆ ನಾಗರಿಕರು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಮಳೆ ಬಂದರೆ ಇಡೀ ಚರಂಡಿಯ ಗಬ್ಬು ನೀರು ರಸ್ತೆಯಲ್ಲೇ ಹರಿಯುತ್ತದೆ. ಪಪಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಖ್ಯಾರೆ ಅನ್ನುತ್ತಿಲ್ಲ.
ಖಾಲಿ ನಿವೇಶನಗಳಲ್ಲಿ ಜಾಲಿ ಗಿಡಗಳು ಬೆಳೆದು ವಿಷ ಜಂತುಗಳು ಸೇರಿಕೊಂಡಿವೆ. ಮಕ್ಕಳು ಆಟವಾಡಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸದಿದ್ದರೆ ಮೇ.10 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ನಿವಾಸಿಗಳು ವ್ಯವಸ್ಥೆಯ ವಿರುದ್ಧ ಆಕೋಶ ವ್ಯಕ್ತಪಡಿಸಿದರು.
ತುಮಾಟಿ ಲೇಔಟ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಕುಮಾರಗೌಡ, ಉಪಾಧ್ಯಕ್ಷರಾದ ಹನುಮಂತಪ್ಪ, ನರೇಂದ್ರಬಾಬು, ಜೆಎಸ್‍ಎಸ್ ಗಣೇಶ್, ಮುಕ್ಬುಲ್ ಅಹ್ಮದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.