ಜಗಳೂರು: ಚುನಾವಣೆಗೆ ಇನ್ನು ಮೂರೇ ದಿನ, ಹೇಗಿದೆ ಎಲೆಕ್ಷನ್ ಹವಾ!

Suddivijaya
Suddivijaya May 7, 2023
Updated 2023/05/07 at 1:09 AM

ಸುದ್ದಿವಿಜಯ, ಜಗಳೂರು: ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕೇವಲ ಮೂರುದಿನಗಳಲ್ಲಿ ಚುನಾವಣೆ ಮಾತ್ರ ಬಾಕಿ ಇದ್ದು ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ನಾಲ್ಕು ಚುನಾವಣೆಯಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಕಳೆದ ಒಂದು ವರ್ಷದ ಹಿಂದೆ ಕಾಂಗ್ರೆಸ್ ಸೇರ್ಪಡೆಯಾಗಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಕಣದಲ್ಲಿದ್ದಾರೆ.

ಇನ್ನು ಕಳೆದ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದ ಕಾರಣಕ್ಕೆ ಹೋರಾಟ ನಡೆಸಿ ಸಿ-ಫಾರ್ಮ್ ಪಡೆದು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ 29 ಸಾವಿರ ಮತಗಳ ಅಂತರದಿಂದ ಸೋತಿದ್ದ ಎಚ್.ಪಿ.ರಾಜೇಶ್ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಸ್ವಾಭಿಮಾನದ ಪಣಕ್ಕಿಟ್ಟು ಪಕ್ಷೇತರ ಅಭ್ಯರ್ಥಿಯಾಗಿ ತೆಂಗಿನ ತೋಟದ ಗುರುತು ಆಯ್ಕೆ ಮಾಡಿಕೊಂಡು ಕಣದಲ್ಲಿದ್ದಾರೆ.

ಕ್ಷೇತ್ರದಲ್ಲಿ 1.93 ಸಾವಿರ ಮತದಾರರಿದ್ದಾರೆ. 22 ಗ್ರಾಪಂ ಸೇರಿದಂತೆ ಅರಸಿಕೆರೆ ಹೋಬಳಿಯ 7 ಗ್ರಾಪಂಗಳು ಸೇರಿ ಒಟ್ಟು 29 ಗ್ರಾಪಂಗಳ ಮತದಾರರು ಈ ಬಾರಿ ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ಮತ ಇಬ್ಬಾಗವಾಗುವ ಸಾಧ್ಯತೆಯಿದ್ದು ಮತದಾರ ಯಾರ ಪರ ಎಂಬುದು ಇನ್ನು ನಿಗೂಢವಾಗಿದೆ.

ಶತಾಯ ಗತಾಯ ಗೆಲ್ಲಲೇ ಬೇಕು ಎಂದು ಪಣತೊಟ್ಟಿರುವ ಈ ಮೂರು ಅಭ್ಯರ್ಥಿಗಳು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಗ್ರಾಪಂ ಒಳಪಡುವ ಪ್ರತಿಯೊಂದು ಗ್ರಾಮಗಳಿಗೆ ಲಗ್ಗೆ ಹಾಕಿ ಮತಬೇಟೆಯಲ್ಲಿ ತೊಡಗಿದ್ದಾರೆ. ಮನೆ ಮನೆ ಪ್ರಚಾರ ಮಾಡಲು ಹಗಲು ರಾತ್ರಿಗಳ ಪರಿವೇಯಿಲ್ಲದೇ ಕಾರ್ಯಕರ್ತರೊಟ್ಟಿಗೆ ಊರೂರು ಸುತ್ತುತ್ತಿದ್ದಾರೆ.

ಪಕ್ಷಾಂತರ ಪರ್ವ ಜೋರು:

ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ಕಾರ್ಯಕರ್ತರು, ಬೆಂಬಲಿಗರು ಪೈಪೋಟಿಗೆ ಬಿದ್ದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‍ನಲ್ಲಿದ್ದ ರಾಜೇಶ್ ಅವರು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿಯ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಸೆಳೆದುಕೊಳ್ಳುವಲ್ಲಿ ತಲ್ಲೀನರಾಗಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್ ಗಾಳಿ!

ಇನ್ನು ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಅವರ ಹವಾ ಜೋರಾಗಿದೆ. ತೊರೆಸಾಲು, ಸೊಕ್ಕೆ, ಕಸಬಾ ಹೋಬಳಿಗಳಲ್ಲಿ ಸಾಂಪ್ರದಾಯಕ ಮತಬೇಟೆಯ ಜೊತೆ ಜೊತೆಗೆ ಹೊಸ ಕಾರ್ಯಕರ್ತರನ್ನು ಹುಟ್ಟುಹಾಕಿ ಅನ್ಯ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಪ್ರಚಾರದ ಅಬ್ಬರವನ್ನು ದಿನದಿಂದ ದಿನಕ್ಕೆ ಇಮ್ಮಡಿಕೊಳಿಸಿಕೊಳ್ಳುತ್ತಿದ್ದಾರೆ.

ಇದಕ್ಕೆ ಅನುಭವಿ ರಾಜಕಾರಣಿ, ಜಿಪಂ ಮಾಜಿ ಸದಸ್ಯ ಹಾಗೂ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕೆಪಿಸಿಸಿ ರಾಜ್ಯ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಸೇರಿದಂತೆ ಎರಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ದೇವೇಂದ್ರಪ್ಪ ಅವರಿಗೆ ಸಾಥ್ ನೀಡುತ್ತಿದ್ದಾರೆ.

ಎಸ್ಸಿ,ಎಸ್ಟಿ, ಒಬಿಸಿ ಮತ್ತು ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟು ಆಯಾ ಗ್ರಾಮಗಳ ಮುಖಂಡರನ್ನು ಪಕ್ಷಕ್ಕೆ ಸೆಳೆಯುತ್ತಲೇ ಅಬ್ಬರ ಪ್ರಚಾರವನ್ನು ಮುಂದುವರೆಸಿದ್ದಾರೆ. ಇತ್ತೀಚೆಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಜಗಳೂರಿನಲ್ಲಿ ಭಾರಿ ಜನಸ್ತೋಮದೊಂದಿಗೆ ಬಹಿರಂಗ ಸಮಾವೇಶ ನಡೆಸಿ ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಮತ್ತು ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ವಿರುದ್ಧ ಸಮರ ಸಾರಿದ್ದು ಕಾಂಗ್ರೆಸ್ ಅಭ್ಯರ್ಥಿಗೆ ಚೈತನ್ಯ ಮೂಡಿಸಿದೆ ಎಂಬುದು ಕಾಂಗ್ರೆಸ್ ನಾಯಕರ ಉತ್ಸಾಹದ ಮಾತು.

ಮಾದಿಗ ಸಮುದಾಯದ ರಾಜ್ಯ ಸಭಾ ಸದಸ್ಯ ಎಲ್.ಹನುಮಂತಯ್ಯ ಅವರು ಸಹ ಸಮುದಾಯದ ಮತಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿಟ್ಟು ಹೋಗದಂತೆ ಮನವಿ ಮಾಡಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ನಟ ಕಿಚ್ಚ ಸುದೀಪ್ ಅವರನ್ನು ಕರೆಸಿ ರೋಡ್ ಶೋ ಮಾಡಿ ಮತ ತಂತ್ರ ಮಾಡಿದ್ದಾರೆ.

ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ:

ಜೆಡಿಎಸ್ ಪಕ್ಷದಿಂದ ದಾವಣಗೆರೆ ತಾಲೂಕಿನ ಮಲ್ಲಾಪುರ ದೇವರಾಜ್ ಅವರಿಗೆ ಪಕ್ಷ ಟಿಕೆಟ್ ಕೊಟ್ಟಿದೆ. ಕ್ಷೇತ್ರದವರೇ ಅಲ್ಲದ ಹೊರಗಿನವರಾಗಿರುವ ಕಾರಣ ಅವರು ಕಣದಲ್ಲಿದ್ದಾರೆ. ಆದರೆ ಕಾರ್ಯಕರ್ತರ ಕೊರತೆಯಿಂದ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಆದರೂ ಹಳ್ಳಿ ಹಳ್ಳಿ ಸುತ್ತಿ ಅವರು ಪ್ರಚಾರ ಮಾಡುತ್ತಿದ್ದಾರೆ.

ಕಾರ್ಯಕರ್ತರು, ನಾಯಕರನ್ನು ಒಟ್ಟುಗೂಡಿಸಿಕೊಂಡು ಗ್ರಾಮಾಂತರ ಭಾಗಗಳಿಗೆ ಲಗ್ಗೆ ಹಾಕಿ ಮತ ಕೇಳುತ್ತಿದ್ದಾರೆ. ಎಸ್‍ಸಿ, ಎಸ್‍ಟಿ, ಲಿಂಗಾಯತ, ಒಬಿಸಿ ಸಾಂಪ್ರಾದಯಕ ಮತಗಳ ಕ್ರೂಢೀರಣದೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಡುತ್ತಾ ಮತ ಪ್ರಚಾರಕ್ಕೆ ಇಳಿದಿರಿರುವ ಬಿಜೆಪಿ ಪಡೆಗೆ ಮತದಾರನ ಪ್ರತಿಕ್ರಿಯೆ ಇನ್ನೂ ನಿಗೂಢವಾಗಿದೆ. ಚುನಾವಣಾಗೆ ಕೇವಲ 3 ದಿನಗಳಷ್ಟೇ ಸಮಯವಿದೆ.

ಈ ಮಧ್ಯೆ ರಣ ಬಿಸಿಲನ್ನೂ ಲೆಕ್ಕಿಸದೇ ಅಭ್ಯರ್ಥಿಗಳು ಕಾರ್ಯಕರ್ತರನ್ನು ಕಟ್ಟಿಕೊಂಡು ಊರೂರು ಸುತ್ತುತ್ತಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳ ಮತ ಓಟದಲ್ಲಿ ಯಾರು ದಿಗ್ವಿಜಯ ಸಾಧಿಸುತ್ತಾರೋ ಮೇ.13 ರವರೆಗೆ ಕಾಯಬೇಕಷ್ಟೇ.

Share this Article
Leave a comment

Leave a Reply

Your email address will not be published. Required fields are marked *

error: Content is protected !!