suddivijayanews27/8/2024
ಸುದ್ದಿವಿಜಯ, ಜಗಳೂರು: ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಖಾಸಗಿ ಕಂಪನಿಯೂ ಅಕ್ರಮವಾಗಿ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದಿಂದ ಆಗಮಿಸಿದ್ದ ಹತ್ತಾರು ಗ್ರಾಮಸ್ಥರು ವಿದ್ಯುತ್ ಕಂಬ ಅಳವಡಿಕೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ತಹಸೀಲ್ದಾರ್ ಅವರಿಗೆ ಮನವರಿಕೆ ಮಾಡಿದರು.
ಕೆಪಿಟಿಸಿಎಲ್ ಸಂಬಂಧಿಸಿದ ಅನೇಕ ಕಂಬಗಳು ಬೀದಿ ಬೀದಿಗಳಲ್ಲಿವೆ. ಆದರೆ ಇದೀಗ ಇಂಟಗ್ರಾಮ ಖಾಸಗಿ ಕಂಪನಿಯೊಂದು ಇದ್ದಕ್ಕಿದ್ದಂತೆ ಗ್ರಾಮಕ್ಕೆ ನುಗ್ಗಿ ಕಂಬಗಳನ್ನು ಅಳವಡಿಸಲಾಗುತ್ತಿದೆ. 11ಕೆವಿ ವಿದ್ಯುತ್ ಕಂಬದ ಜತೆಯಲ್ಲಿ ತಂತಿಗಳನ್ನು ಎಳೆಯಲು ಮುಂದಾಗಿದೆ.
ಇದರಿಂದ ತುಂಬ ತೊಂದರೆಯಾಗುತ್ತಿದೆ. ಹಾಗಾಗಿ ಕಂಬಳನ್ನು ತೆರವುಗೊಳಿಸಿ ಬೇರೆ ಕಡೆಯಿಂದ ಅಳವಡಿಸಲಿ ಎಂದು ಮನವಿ ಮಾಡಿದರು.
ಹೋರಾಟಗಾರ ಹನುಮಂತಪ್ಪ ಮಾತನಾಡಿ, ಕಂಪನಿಯೂ ಕೆಲಸ ಮಾಡುವ ಜತೆಗೆ ಗ್ರಾಮದಲ್ಲಿ ವೈಶಮ್ಯ, ಧ್ವೇಷ ಭಾವನೆ ಮೂಡಿಸುತ್ತಿದೆ. ಕೆಲವರಿಗೆ ಹಣದಾಸೆ ತೋರಿಸಿ ಗುಂಪುಗಾರಿಕೆ ಮಾಡಿ ಹೋರಾಟ ಮಾಡುವವರನ್ನು ಹತ್ತಿಕ್ಕುವ ಹುನ್ನಾರ ನಡೆಸಿದ್ದಾರೆ.
ಯಾವುದೇ ಬೆದರಿಕೆಗಳಿಗೆ ಜಗ್ಗುವುದಿಲ್ಲ. ನಮ್ಮ ಹೋರಾಟ ನಿಲ್ಲುವುದಿಲ್ಲ. ಗ್ರಾಮದ ಜತೆಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡಿದರು.
ಗ್ರಾಮಗಳಲ್ಲಿ ಕೆಲಸ ಮಾಡುವ ಮುನ್ನ ಗ್ರಾ.ಪಂ ಅಧ್ಯಕ್ಷರು, ಪಿಡಿಒ ಗಮನಕ್ಕೆ ತರಬೇಕು. ಜನರ ಒಪ್ಪಿಗೆಯನ್ನು ಪಡೆದು ಕಾಮಗಾರಿ ಆರಂಭಿಸಿದರೆ ಯಾವ ತೊಂದರೆ ಇರುವುದಿಲ್ಲ. ಆದರೆ ಖಾಸಗಿ ಕಂಪನಿಯವರೊಂದಿಗೆ ಕೆಲವರು ಶಾಮೀಲಾಗಿ ದೌರ್ಜನ್ಯದಿಂದ ಕಂಬ ಅಳವಡಿಸುವ ಪ್ರಯತ್ನ ನಡೆಸುತ್ತಿರುವುದು ಖಂಡನಿಯ ಎಂದರು.
ವಿದ್ಯುತ್ ಪ್ರತಿಯೊಬ್ಬರಿಗೂ ಅವಶ್ಯಕ ಹಾಗಾಗಿ ಅದಕ್ಕೆ ನಮ್ಮ ವಿರೋಧವಿಲ್ಲ. ಗ್ರಾಮದ ಮಧ್ಯ ಭಾಗದಿಂದ ಅಳವಡಿಸುತ್ತಿರುವುದು ನಮ್ಮ ವಿರೋಧವಿದೆ. ಊರಿನ ಹೊರಭಾಗದಲ್ಲಿ ಅಳವಡಿಸಿದರೆ ಒಳ್ಳೆಯದು.
ಆದರೆ ಕಂಪನಿಯೂ ಕಂಬಗಳು ಹೆಚ್ಚಾಗಿ ಹಣ ಹೆಚ್ಚು ಖರ್ಚಾಗುತ್ತದೆ ಎಂಬ ಉದ್ದೇಶದಿಂದ ಗ್ರಾಮದೊಳಗೆ ಕಾಮಗಾರಿ ಆರಂಭ ಮಾಡಿದ್ದಾರೆ. ತಕ್ಷಣವೇ ಕಂಪನಿಯವರು ಕಂಬಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ, ವಿದ್ಯುತ್ ಪೂರೈಸಲು ವಿದ್ಯುತ್ ಕಂಬಗಳನ್ನು ಅಳವಡಿಸುವ ಖಾಸಗಿ ಕಂಪನಿಗಳು ಸರಕಾರದ ಅಧಿನದಲ್ಲಿ ಕೆಲಸ ಮಾಡುತ್ತಿವೆ.
ಕೆಪಿಟಿಸಿಎಲ್ ರೀತಿ ಸೋಲಾರ್ ಕಂಬಗಳನ್ನು ಅಳವಡಿಸಲಾಗಿದೆ. ಇದರಿಂದ ಯಾರಿಗೂ ತೊಂದರೆ ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು.
ಎಲ್ಲವನ್ನು ವಿರೋಧಿಸುತ್ತಾ ಹೋದರೆ ಅಭಿವೃದ್ದಿ ಹೇಗೆ ಸಾಧ್ಯ. ಕಾನೂನು ಬಾಹಿರವಾಗಿ ಕಾಮಗಾರಿ ಮಾಡಿದ್ದರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಹಂಪಣ್ಣ, ರುದ್ರಪ್ಪ, ಕೊಟ್ರಪ್ಪ, ರಂಗಪ್ಪ, ಗೋಣೆಪ್ಪ, ಸಿದ್ದಪ್ಪ, ಸಂತೋಷ್, ಕೊಟ್ರೇಶ್ ಸೇರಿದಂತೆ ಮತ್ತಿತರರಿದ್ದರು.