ಸುದ್ದಿವಿಜಯ, ಜಗಳೂರು: ತಾಲೂಕಿನ ಚಿಕ್ಕ ಉಜ್ಜಯಿನಿ ಗ್ರಾಮದಲ್ಲಿ ಡಿ.18ರಂದು ಬೆಳಗ್ಗೆ 9 ಗಂಟೆಗೆ ‘ವಿನಯ ನಡೆ ಹಳ್ಳಿ ಕಡೆಗೆ’ ವಿನೂತನ ಪಾದ ಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲೋಕಸಭಾ ಕ್ಷೇತ್ರ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ ವಿನಯ್‍ಕುಮಾರ್ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿನಯಮಾರ್ಗ ಟ್ರಸ್ಟ್ ವತಿಯಿಂದ ಡಿ.18ರ ಸೋಮವಾರದಿಂದ ಜ.12ರ ವರೆಗೂ ಸುಮಾರು 25 ದಿನಗಳ ಕಾಲ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನ ಸಭಾ ಕ್ಷೇತ್ರಗಳ ಹಳ್ಳಿಗಳಲ್ಲಿ ಪಾದಯಾತ್ರೆ ಮತ್ತು ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದರು.ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ ವಿನಯ್‍ಕುಮಾರ್
ಚಿಕ್ಕಉಜ್ಜನಿ ಗ್ರಾಮದಿಂದ ಪಾದಯಾತ್ರೆ ಪ್ರಾರಂಭವಾಗಲಿದ್ದು, ಪಾದಯಾತ್ರೆಯಲ್ಲಿ ಜನಪ್ರತಿನಿಧಿಗಳು, ಮುಖಂಡರು, ಮಹಿಳೆಯರು ಯುವಕರು ಅಭಿಮಾನಿಗಳು ಪಾಲ್ಗೊಳ್ಳಲ್ಲಿದ್ದಾರೆ.
ಪಾದಯಾತ್ರೆ ಪ್ರಾರಂಭದ ದಿನದಿಂದ ಮುಕ್ತಾಯದವರೆಗೂ ಪ್ರತಿನಿತ್ಯ ರಾತ್ರಿ ವಾಸ್ತವ್ಯ ಮಾಡುವ ಹಳ್ಳಿಗಳಲ್ಲಿ ಮುಖಂಡರೊಂದಿಗೆ ಗ್ರಾಮಗಳ ಮೂಲಭೂತ ಸಮಸ್ಯೆಗಳು, ಕ್ಷೇತ್ರ ಅಭಿವೃದ್ಧಿ ಕುರಿತು ಗ್ರಾಮಸ್ಥರ ಜತೆ ಸಮಾಲೋಚನೆ ನಡೆಸಲಾಗುವುದು.
ಈಗಾಗಲೇ ಕ್ಷೇತ್ರದ ವ್ಯಾಪ್ತಿಗಳ ಹಳ್ಳಿಗಳಲ್ಲಿ ಭೇಟಿ ಮಾಡಿದ್ದು, ಜನಗಳ ಸಮಸ್ಯೆಗಳ ಬಗ್ಗೆ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿನಯಮಾರ್ಗ ಟ್ರಸ್ಟ್ ವತಿಯಿಂದ ಈಗಾಗಲೇ ಅನೇಕ ಜನಪಯೋಗಿ, ಸಮಾಜಮುಖ, ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಎರಡು ಸಾವಿರ ವಿಕಲಚೇತನರಿಗೆ ವೀಲ್ ಚೇರ್, ವಾಕಿಂಗ್ ಸ್ಟಿಕ್, ವಾಕರ್, ಶ್ರವಣಯಂತ್ರಗಳನ್ನು ಟ್ರಸ್ಟ್‍ನಿಂದ ವಿತರಣೆ ಮಾಡಲಾಗಿದೆ.
ಅಂತೆಯೇ ಆಟೋ, ಗೂಡ್ಸ್,ಲಾರಿ ಚಾಲಕರಿಗೆ ಸಮವಸ್ತ್ರ ಅವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕ ಸಹಾಯ ಮಾಡಲಾಗಿದೆ. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಯುಪಿಎಸ್‍ಸಿ ಕೆಪಿಎಸ್‍ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಮನಸ್ಥೈರ್ಯ ತುಂಬಿ ಪದವಿ ನಂತರ ಮುಂದೇನು? ಎಂಬುವ ವಿಚಾರಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಲಾಗುತ್ತಿದೆ. ಎಲ್ಲಾ ಕಡೆ ಜನ ಸಾಮಾನ್ಯರು ಪ್ರೀತಿ ಅಭಿಮಾನಗಳನ್ನು ತೋರುತ್ತಿದ್ದಾರೆ. ಕ್ಷೇತ್ರದ ಜನರೂ ಕೂಡ ಬದಲಾವಣೆಯ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ನನಗೂ ಕೂಡ ಚುನಾವಣೆಯಲ್ಲಿ ಜನರು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಹಾಗೂ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ವಿನಯಮಾರ್ಗ ಟ್ರಸ್ಟ್‍ನ ಶರತ್‍ಕುಮಾರ್, ಮಲ್ಲಿಕಾರ್ಜುನ್, ಕಿರಣ್, ಶ್ರೀನಿವಾಸ್, ಮುಖಂಡರಾದ ಕೆಳಗೋಟೆ ಭದ್ರಿ, ಗುಡ್ಡದಲಿಂಗನಹಳ್ಳಿ ನಾಗರಾಜ್, ಮುದಿಯಪ್ಪ, ಮರೇನಹಳ್ಳಿ ನಾಗರಾಜ್, ಗೌರಿಪುರ ನಾಗರಾಜ್ ಸೇರಿದಂತೆ ಮತ್ತಿತರರಿದ್ದರು.