ಸುದ್ದಿವಿಜಯ, ಜಗಳೂರು: ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ಜಗಳೂರು ತಾಲೂಕಿನ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬರಪೂರ ಕೊಡುಗೆ ನೀಡಿವೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ಜಗಳೂರು ತಾಲೂಕಿನಲ್ಲಿ ರಚಿಸಲಾಗಿರುವ ಹೊಸ ಕಂದಾಯ ಗ್ರಾಮಗಳಲ್ಲಿನ ಅರ್ಹ 1500 ಫಲಾನುಭವಿಗಳಿಗೆ ಸೋಮವಾರ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಸರಕಾರದಿಂದ 1300 ಕೋಟಿ ರೂ ಅಪ್ಪರ್ ಭದ್ರಾ ಯೋಜನೆಗೆ ಹಣ ಮಂಜೂರು ಮಾಡಲಾಗಿದೆ. ರಾಜ್ಯ ಸರಕಾರದಿಂದ 57 ಕೆರೆ ತುಂಬಿಸುವ ತುಂಗಭದ್ರಾ ಏತ ನೀರಾವರಿ ಯೋಜನೆ ಜೊತೆಗೆ 486 ಕೋಟಿ ರೂಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಹಣ ಮಂಜೂರು ಮಾಡಿದ್ದು ಬರ ಮುಕ್ತ ಜಗಳೂರು ತಾಲೂಕು ನಮ್ಮ ಡಬಲ್ ಎಂಜಿನ್ ಸರಕಾರದ ಮುಂಚೂಣಿ ಯೋಜನೆಯಾಗಿದೆ ಎಂದರು.
ತಾಲೂಕಿನ ವಡ್ಡರಹಟ್ಟಿ, ಲಂಬಾಣಿ ತಾಂಡಗಳು, ಗೊಲ್ಲರಹಟ್ಟಿ ಒಟ್ಟು 20 ಗ್ರಾಮಗಳಿಗೆ 1500 ವಿವಿಧ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದ್ದು, ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು.
ಸರ್ವರ ಅಭಿವೃದ್ಧಿಗೆ ಕೇಂದ್ರ, ರಾಜ್ಯದ ಬಿಜೆಪಿ ಸರಕಾರಗಳು ಕೊಟ್ಟ ಯೋಜನೆಗಳನ್ನು ಮರೆಯದೇ ಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಮಾತನಾಡಿ, ಮನೆ ಬಾಗಿಲಿಗೆ ಸರಕಾರದ ಯೋಜನೆಯನ್ನು ಕೊಂಡೊಯ್ಯಲಾಗಿದೆ.
ಅತ್ಯಂತ ಹಿಂದುಳಿದ 20 ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಈಗಾಗಲೇ ಪಹಣಿ ಹಕ್ಕುಪತ್ರ ವಿತರಣೆ ಮಾಡಲಾಗಿದ್ದು ಸರಕಾರದ ಯೋಜನೆಗಳನ್ನು ಚಾಚೂ ತಪ್ಪದೇ ತಲುಪಿಸುವ ಕಾರ್ಯವನ್ನು ತಾಲೂಕು ಆಡಳಿತ ಮಾಡಿದೆ. ಈ ಬಾರ 1500 ಜನರಿಗೆ ಏಕ ಕಾಲದಲ್ಲೇ ಹಕ್ಕು ಪತ್ರ ವಿತರಣೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಬಿಳಿಚೋಡು ಕಂದಾಯ ಅಧಿಕಾರಿ ಧನಂಜಯ, ಕಸಬಾ ಕಂದಾಯ ಅಧಿಕಾರಿ ಕುಬೇರ್ ನಾಯ್ಕ್ ಸೇರಿದಂತೆ 20 ಹೊಸ ಕಂದಾಯ ಗ್ರಾಮಗಳ 1500ಕ್ಕೂ ಹೆಚ್ಚು ಮಂದಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.