ಸುದ್ದಿವಿಜಯ,ಜಗಳೂರು:ಹನ್ನೆರಡನೆಯ ಶತಮಾನದಲ್ಲಿ ಇತಿಹಾಸದಲ್ಲಿಯೇ ಪ್ರಥಮವಾಗಿ ದುಡಿಯುವ ವರ್ಗದ ಅಸ್ಮಿತೆಯ ಪ್ರತೀಕವಾಗಿ ಹುಟ್ಟಿಕೊಂಡಿದ್ದು ಶರಣ ಚಳವಳಿ ಎಂದು ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಚಳವಳಿಯಲ್ಲಿ ಶತಮಾನಿಗಳಿಂದಲೂ ಜಾತಿಯ ಹೆಸರಿನಲ್ಲಿ ಶೋಷಣೆ, ಅವಮಾನಕ್ಕೊಳಗಾಗಿದ್ದ ಕಷ್ಟ ಸಹಿಷ್ಣುಗಳು ಶ್ರಮ ಜೀವಿಗಳೆಲ್ಲರೂ ಒಂದಾಗಿ ಚಾತುರ್ವರ್ಣ ವ್ಯವಸ್ಥೆಯ ವಿರುದ್ದ ಸೆಟೆದು ನಿಂತರು.
ಜಾತಿ, ವರ್ಣ ಆಧರಿಸಿ ಅಸಮಾನತೆಯಿಂದ ನಿರ್ಮಾಣಗೊಂದಿದ್ದ ಸಮಾಜವನ್ನು ದಿಕ್ಕರಿಸಿ ಪ್ರತಿಯಾಗಿ ಸಹಬಾಳ್ವೆ, ಸಮಾನತೆ ಸಿದ್ದಾಂತಗಳ ಆಧಾರದ ಮೇಲೆ ಜನ ಮುಖಿ ಸಮಾಜ ನಿರ್ಮಿಸಿದರು.
ಭಾವನೆಗಳನ್ನು ಅಭಿವ್ಯಕ್ತಿಸಲು ಸಾಹಿತ್ಯವನ್ನು ಮಾಧ್ಯಮವನ್ನಾಗಿ ಮಾಡಿಕೊಂಡರು, ಅಸಂಖ್ಯಾತ ಶರಣರ ನೇತೃತ್ವದಲ್ಲಿ ನಡೆದ ಈ ಚಳವಳಿಯ ಪ್ರಮುಖ ಹರಿಕಾರರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು ಎಂದರು.
ಹಡಪದ ಸಮಾಜ ಸಂಘದ ತಾಲೂಕು ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಕ್ಷೌರಿಕ ವೃತ್ತಿಯನ್ನು ಮಾಡುವ ಹಡಪದ ಸಮಾಜದವರು ಅಪ್ಪಣ್ಣನೇ ತಮ್ಮ ಸಮಾಜದ ಮೂಲಪುರುಷವಾಗಿದ್ದಾರೆ.
ಬೆಳಗ್ಗೆ ಹಡಪದ ಸಮಾಜದವರ ಮುಖ ನೋಡಿದರೆ ಅಪಶಕುನವಾಗುತ್ತದೆ ಎಂಬ ಮೂಢನಂಬಿಕೆ ಸಮಾಜದಲ್ಲಿದ್ದು ಅದನ್ನು ನಿವಾರಿಸಲು ಬಸವಣ್ಣನವರು ಯಾರೇ ಬಂದರೂ ಮೊದಲು ಅಪ್ಪಣ್ಣನವರನ್ನು ನೋಡಿಕೊಂಡೆ ಬರಬೇಕೆಂಬ ನಿಯಮ ಮಾಡಿದ್ದರೆಂಬ ಪ್ರತೀತಿ ಇದೆ.
ಹೀಗಾಗಿ, ಅಪ್ಪಣ್ಣನವರು ಶರಣರ ಕ್ಷೌರ ಮಾಡುವ ವೃತ್ತಿ ಮಾಡುತ್ತಿದ್ದರೆಂಬ ಅಭಿಪ್ರಾಯಗಳಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ಹಡಪದ ಸಮಾಜಕ್ಕೆ ಸರ್ಕಾರ ನಿಗಮ ಮಂಡಳಿ ಸ್ಥಾಪಿಸಿರುವುದು ಸ್ವಾಗತರ್ಹ. ಹಡಪದ ಸಮುದಾಯಕ್ಕೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ,ರಾಜಕೀಯ ಕ್ಷೇತ್ರಗಳಲ್ಲಿ ಸ್ಥಾನಮಾನ ಕಲ್ಪಿಸಬೇಕು.
ಕ್ಷೌರಿಕ ವೃತ್ತಿ ಅವಲಂಬಿಸಿರುವ ನಮ್ಮನ್ನು ಕೀಳಿರಿಮೆಯಿಂದ ಕಾಣಬಾರದು.ನಮ್ಮ ಸಮಾಜದ ವ್ಯಕ್ತಿ ಎದುರಿಗೆ ಆಗಮಿಸಿದರೆ ಅಪಶಕುನ ಎಂಬ ಮೂಢನಂಬಿಕೆಯ ದೃಷ್ಟಿಕೋನ ಬದಲಾಗಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಮಾತನಾಡಿ, ಮನುಷ್ಯನಿಗೆ ಬೆಲೆ ಸಿಗುವುದು ಹುಟ್ಟು ಜಾತಿಯಿಂದಲ್ಲಾ ಅವರ ಕಾಯಕ ನಿಷ್ಠೆ, ಸತ್ಯದಿಂದ ಎಂಬುದನ್ನು ಶರಣರು ಸಾಬೀತುಮಾಡಿದ್ದಾರೆ.
ಹಡಪದ ಸಮಾಜದವರು ಮೂಲವೃತ್ತಿ ಅವಲಂಬಿಸದೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ಸಮಾಜಕ್ಕೆ ಕೀರ್ತಿ ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್, ಸಮಾಜದ ಮುಖಂಡರಾದ ಷಡಕ್ಷರಿ,ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರಿದ್ದರು.