ಸುದ್ದಿವಿಜಯ, ಜಗಳೂರು: ಈಗಾಗಲೇ ತಾಲೂಕಿನ ಕೆಲ ಗ್ರಾಮಗಳಲ್ಲಿ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಹಾಹಾಕಾರ ಸೃಷ್ಟಿಯಾಗಿದೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ನಾನು ಸುಮ್ಮನಿರುವುದಿಲ್ಲ. ಬರವನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸುವ ಕೆಲಸ ಮಾಡೋಣ ಎಂದು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಕೆಡಿಪಿ ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ 2ನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಇಲಾಖಾವಾರು ಮಾಹಿತಿ ಪಡೆದ ಅವರು ಅಧಿಕಾರಿಗಳಿಗೆ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸಂದೇಶ ರವಾನಿಸಿದರು.
ನೀರಿನ ಸಮಸ್ಯೆ ಜವಾಬ್ದಾರಿಯಿಂದ ನಿರ್ವಹಿಸಿ:
ಪಟ್ಟಣ ಸೇರಿದಂತೆ ತಾಲೂಕಿನ ಹನುಮಂತಾಪುರ, ತಮಲೇಹಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ರೈತರ ಪಂಪ್‍ಸೆಟ್‍ಗಳಿಂದ ನೀರು ಖರೀದಿಸಿ ಪೂರೈಸಿ ಎಂದು ತಾಪಂ ಇಒ ಕೆ.ಟಿ.ಕರಿಬಸಪ್ಪಗೆ ಸೂಚನೆ ನೀಡಿದರು.
ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ ಮಾತನಾಡಿ, ಪಿಡಿ ಅಕೌಂಟ್‍ನಲ್ಲಿ 42 ಲಕ್ಷ ರೂ ಇದ್ದು ಕೊಳವೆ ಬಾವಿ ಕೊರೆಸಲು ಮತ್ತು ಖಾಸಗಿ ಅವರಿಂದ ನೀರು ಖರೀದಿಸಿ ಯಾವುದೇ ಸಮಸ್ಯೆಯಾಗದಂತೆ ಪೂರೈಸುತ್ತೇವೆ ಎಂದರು.
ಬರ ನಿರ್ವಹಣೆಯಲ್ಲಿ ಟೀಂ ವರ್ಕ್ ಆಗಿ ಎಲ್ಲ ಅಧಿಕಾರಿಗಳು ಕೆಲಸ ಮಾಡಬೇಕು. ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಿ. ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಎಂದು ಶಾಸಕರು ಸೂಚನೆ ನೀಡಿದರು.
ಗೃಹ ಲಕ್ಷ್ಮಿ ಯೋಜನೆ ಪರಿಣಾಮಕಾರಿ ಸೂಚನೆ:
ಗೃಹ ಲಕ್ಷ್ಮಿ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ತಾಂತ್ರಿಕವಾಗಿ ಅನೇಕರಿಗೆ 2000 ರೂ ಹಣ ಜಮಾವಣೆಯಾಗಿಲ್ಲ ಎಂದು ನನಗೆ ಕರೆ ಮಾಡುತ್ತಿದ್ದಾರೆ. ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸಿಡಿಪಿಒ ಬೀರೇಂದ್ರಕುಮಾರ್ ಅವರಿಗೆ ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿ ಬೀರೇಂದ್ರಕುಮಾರ್, 39000 ಅರ್ಜಿಗಳು ಬಂದಿವೆ. 34480 ಜನರಿಗೆ ಹಣ ಜಮೆಯಾಗಿದೆ. 252 ಜನರಿಗೆ ಹಣ ವರ್ಗಾವಣೆ ಫೇಲೂರ್ ಆಗಿದೆ. 1643 ಜನರಿಗೆ ಆಧಾರ್, ಹೆಸರು, ಬ್ಯಾಂಕ್ ಲಿಂಕ್ ಆಗದೇ ಉಳಿದಿವೆ. ತಾಂತ್ರಿಕ ಸಮಸ್ಯೆಗಳಿಗೆ ನಿತ್ಯವೂ ಸ್ಪಂದಿಸುತ್ತಿದ್ದೇವೆ. ಹೊಸದಾಗಿ ಗೃಹ ಲಕ್ಷ್ಮಿ ಯೋಜನೆಗೆ 36134 ಅರ್ಜಿಗಳು ಬಂದಿವೆ ಎಂದು ಉತ್ತರಿಸಿದರು.
ತೀವ್ರ ಬರ ಹಿನ್ನೆಲೆಯಲ್ಲಿ ಜನ ಗೃಹ ಲಕ್ಷ್ಮೀ ಯೋಜನೆಯಿಂದ ಜೀವನ ನಿರ್ವಹಣೆಗೆ ಅನುಕೂಲವಾಗಿದ್ದು ತಾಂತ್ರಿಕ ಸಮಸ್ಯೆಯನ್ನು ಬಗೆ ಹರಿಸಲು ಬ್ಯಾಂಕ್ ಮ್ಯಾನೇಜರ್, ಅಂಚೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಎಂದು ಸೂಚನೆ ನೀಡಿದರು. ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಕೆಡಿಪಿ ಸಭೆ ನಡೆಸಿದರು.
ಗೃಹ ಲಕ್ಷ್ಮಿ ರಾಜಕೀಯ
‘ಗೃಹ ಲಕ್ಷ್ಮಿ’ ಯೋಜನೆ ಹಣ ಬೀಳದೇ ಇರುವ ಕಾರಣ ಕೆಲವರು ರಾಜಕೀಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‍ಗೆ ವೋಟ್ ಹಾಕಿದವರಿಗೆ ಮಾತ್ರ ಹಣ ಬರುತ್ತಿದೆ. ವೋಟ್ ಹಾಕದವರಿಗೆ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ನಮ್ಮ ಮನೆ ಬಾಗಿಲಿಗೆ ಬಂದು ಜನ ಗೃಹ ಲಕ್ಷ್ಮಿ ಹಣ ಬಂದಿಲ್ಲ ಎಂದು ಕೇಳುತ್ತಿದ್ದಾರೆ. ಈಗ ನಾನು ಕ್ಷೇತ್ರದ ಶಾಸಕ. ಸಮಾಜಿಕ ನ್ಯಾಯ ಕೊಡಿಸಲು ಬದ್ಧನಾಗಿದ್ದೇನೆ. ತ್ವರಿತವಾಗಿ ತಾಂತ್ರಿಕ ಸಮಸ್ಯೆ ಬಗೆಹರಿಸಿ ಎಂದು ಶಾಸಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಿಡಿಓಗಳಿಗೆ ಎಚ್ಚರಿಕೆ:
ಪಿಡಿಒಗಳು ಚನ್ನಾಗಿ ಕೆಲಸ ಮಾಡುತ್ತಿಲ್ಲ. ನಾನು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದೇನೆ. ಮೊನ್ನೆಯಷ್ಟೇ ಪಿಡಿಒ ನಂದಿಲಿಂಗೇಶ ಸಾರಂಗಮಠ ಲೋಕಾ ಬಲೆಗೆ ಬಿದ್ದು ಪಿಡಿಒ ಹುದ್ದೆಗೆ ಕಪ್ಪು ಚುಕ್ಕೆಯಾಗಿದೆ.
‘ಹನುಮಂತಾಪುರ ಗ್ರಾಪಂ ಪಿಡಿಒ ಕೊಟ್ರೇಶ್’ ನಿಮ್ಮ ಮೇಲೆ ಸಾಕಷ್ಟು ದೂರುಗಳು ಬಂದಿವೆ. ಸಮಸ್ಯೆ ಬಂದಾಗ ನಿಮ್ಮ ಪರ ಯಾರೂ ಬರಲ್ಲ. ಸೋಮಾರಿತನ ಬಿಟ್ಟು ಕೆಲಸ ಮಾಡಿ, ತಪ್ಪು ಮಾಡಿದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದು ಸೂಚನೆ ನೀಡಿದರು.
ನನ್ನ ಗ್ರಾಮದಲ್ಲೇ ಅಕ್ರಮ ಮದ್ಯ ಮಾರಾಟ!
ನನ್ನ ಗ್ರಾಮದಲ್ಲೇ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಗೂಡಂಗಡಿಗಳಲ್ಲಿ ಎಗ್ಗಿಲ್ಲದೇ ಮದ್ಯ ಮಾರಾಟವಾಗುತ್ತಿದ್ದು ಸರಿಯಲ್ಲ. ಇನ್‍ಸ್ಪಕ್ಟರ್ ಎಂ.ಶ್ರೀನಿವಾಸ್ ರಾವ್ ಸ್ಥಳಕ್ಕೆ ಭೇಟಿ ನೀಡಿ ಅವರ ವಿರುದ್ಧ ನಿರ್ಧಾಕ್ಷ್ಯಣ್ಯವಾಗಿ ಕ್ರಮ ಕೈಗೊಳ್ಳಿ. ಕ್ಷೇತ್ರದಲ್ಲಿ ಎಲ್ಲೆಲ್ಲಿ ಮಟ್ಕ, ಇಸ್ಪೀಟ್ ದಂಧೆ ನಡೆಯುತ್ತದೋ ಅಲ್ಲಿ ಕಡಿವಾಣ ಹಾಕಿ ಎಂದು ಸೂಚನೆ ನೀಡಿದರು.
ಸಮಾಜ ಕಲ್ಯಾಣ ವಿಲಾಖೆ ಕಟ್ಟಗಳು ಶಿಫ್ಟ್ ಮಾಡಿ
ಸಮಾಜ ಕಲ್ಯಾಣ ಇಲಾಖೆಯ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಈ ತಿಂಗಳ ಅತ್ಯಕ್ಕೆ ಪಪಂ ಕಚೇರಿಯ ಮೊದಲನೇ ಮಹಡಿಗೆ ಶಿಫ್ಟ್ ಆಗಬೇಕು. ತಿಂಗಳಿಗೆ 80 ಸಾವಿರ ಬಾಡಿಗೆ ಕಟ್ಟುತ್ತಿದ್ದೀರಿ. ಅದು ಖಾಸಗಿಯವರಿಗೆ ಹೋಗುತ್ತದೆ. ಅದೇ ಹಣ ಪಪಂಗೆ ಹೋಗಲಿ.
ಈ ತಿಂಗಳು ಶಿಫ್ಟ್ ಆಗದೇ ಇದ್ದರೆ ನಿಮ್ಮ ಸಂಬಳದಲ್ಲಿ ಪಾವತಿ ಮಾಡಿ. ಏನೇ ಸಮಸ್ಯೆಗಳಿದ್ದರೂ ಜಿಲ್ಲಾಧಿಕಾರಿಗಳ ಜೊತೆ ನಾನು ಮಾತನಾಡಿ ಬಗೆ ಹರಿಸುತ್ತೇನೆ ಎಂದು ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ & ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಬೆಸ್ಕಾಂ, ಪಶುಂಗೋಪನೆ, ಆರೋಗ್ಯ, ಶಿಕ್ಷಣ, ಅಕ್ಷರದಾಸೋಹ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಶಾಸಕರು ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಗಂಭೀರವಾಗಿ ಕೆಲಸ ಮಾಡಬೇಕು. ಬರದ ಹಿನ್ನೆಲೆ ಸಮರೋಪಾದಿಯಲ್ಲಿ ಕೆಲಸ ಮಾಡೋಣ ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲ, ತಾಪಂ ಇಓ ಕೆ.ಟಿ.ಕರಿಬಸಪ್ಪ ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ತೋಟಗಾರಿಕೆ ಇಲಾಖೆ ಎಸ್‍ಎಡಿಎಚ್ ತೋಟಯ್ಯ ಸೇರಿದಂತೆ ಅನೇಕರು ಇದ್ದರು.