ಬೆಳೆದ ಬೆಳೆಗಳಿಗೆ ಮೌಲ್ಯವರ್ಧನೆ ಮಾಡಿದರೆ ಮಾತ್ರ ಅನ್ನದಾತರಿಗೆ ಲಾಭ: ಶಾಸಕ ಬಿ. ದೇವೇಂದ್ರಪ್ಪ!

Suddivijaya
Suddivijaya June 1, 2023
Updated 2023/06/01 at 2:16 PM

ಸುದ್ದಿವಿಜಯ, ಜಗಳೂರು: ಅನಿಶ್ಚಿತತೆ ಮತ್ತು ಕೃಷಿಯಲ್ಲಿನ ವಿವಿಧ ಬಿಕ್ಕಟ್ಟುಗಳಿಂದ ಅನ್ನದಾತ ಸಂಕಷ್ಟದಲ್ಲಿದ್ದಾನೆ. ದೇಶಕ್ಕೆ ಅನ್ನ ಕೊಡುವ ರೈತನಿಗೆ ನಿಜವಾದ ಗೌರವ ಸಿಗುತ್ತಿಲ್ಲವೆಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ವಿಷಾದಿಸಿದರು.

ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಗುರುವಾರ ಕೃಷಿ ಇಲಾಖೆ ಹಾಗೂ ಜಲನಯನ ಅಭಿವೃದ್ದಿ ಇಲಾಖೆ, ಸಂಪನ್ಮೂಲ ಸಂಸ್ಥೆ, ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ನೂತನ ಕಚೇರಿ ಮತ್ತು ಗೋದಾಮು ಉದ್ಘಾಟಿಸಿ ಮಾತನಾಡಿದರು.

ಮಳೆಯ ವೈಪರಿತ್ಯ, ಬೆಳೆ ಹಾನಿ, ಸಾಲ ಹೀಗೆ ಹತ್ತಾರು ಸಮಸ್ಯೆಗಳ ನಡುವೆ ರೈತರು ಸಿಕ್ಕಿಕೊಂಡು ಒದ್ದಾಡುತ್ತಾರೆ. ಕೃಷಿ ಭೂಮಿಯಲ್ಲಿ ವರ್ಷವಿಡಿ ಬೆವರು ಸುರಿಸಿ ಬೆಳೆದ ಬೆಳೆಗಳಿಗೆ ಉತ್ತಮವಾದ ಬೆಲೆ ಇಲ್ಲದೇ, ಕೈಗೆ ಹಣ ಸಿಗದೇ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದಲೇ ತರಳಬಾಳು ಕೃಷಿ ವಿಜ್ಞಾನ ರೈತ ಉತ್ಪಾದಕರ ಕಂಪನಿಗಳು ಬಂದಿವೆ. ಇದರಿಂದ ರೈತರ ಬದುಕು ಬದಲಾಗಲಿದೆ ಎಂದರು.

ರೈತರು ಸುಖವಾಗಿದ್ದರೆ ದೇಶ ಸಂತೋಷವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕೃಷಿಕರಿಗೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಬೇಕು, ಈ ಸಂಸ್ಥೆಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ರೈತರ ಒಳಿತನ್ನು ಭಯಸುತ್ತೇನೆ ಎಂದರು.

ಚುನಾವಣೆ ಜಿಡ್ಡು ಮರೆತ ನಾಯಕರು:

ವೇದಿಕೆಯಲ್ಲಿ ಕೂತಿದ್ದ ಮಾಜಿ ಶಾಸಕರಾದ ಟಿ. ಗುರುಸಿದ್ದನಗೌಡ, ಎಚ್.ಪಿ ರಾಜೇಶ್ ಇಬ್ಬರನ್ನು ಶಾಸಕ ಬಿ. ದೇವೇಂದ್ರಪ್ಪ ಹಾಡಿ ಹೊಗಳಿದರು. ಬರಗಾಲದ ಸಮಯದಲ್ಲಿ ಕ್ಷೇತ್ರದಲ್ಲಿ ಹೆಚ್ಚು ಚೆಕ್ ಡ್ಯಾಂಗಳನ್ನು ನಿರ್ಮಿಸಿ ಅಂತರ್ಜಲ ವೃದ್ದಿಗೆ ಶ್ರಮಿಸಿದ ಟಿ.ಗುರುಸಿದ್ದನಗೌಡರು ಅವರ ಸಾಧನೆಗೆ ಚೆಕ್‍ಡ್ಯಾಂ ಸರದಾರ ಎಂಬ ಬಿರುದನ್ನು ಜನತೆ ನೀಡಿದ್ದಾರೆ.

ಇನ್ನು ತಾಲೂಕಿನಾದ್ಯಂತ ಹಾಳಾಗಿದ್ದ ರಸ್ತೆಗಳನ್ನು ಗುರುತಿಸಿ ಹೊಸ ರಸ್ತೆಗಳನ್ನು ಮಾಡುವ ಮೂಲಕ ಎಚ್.ಪಿ.ರಾಜೇಶ್ ರಸ್ತೆಗಳ ರಾಜ ಎಂದು ಕರೆಸಿಕೊಂಡಿದ್ದಾರೆ. ಅವರ ಸಲಹೆ ಸಹಕಾರ ಪಡೆದು ನನ್ನಿಂದಾಗುವ ಉತ್ತಮವಾದ ಕೆಲಸ ಕ್ಷೇತ್ರ ಅಭಿವೃದ್ದಿ ಪಡಿಸುತ್ತೇನೆ ಎಂದರು.

ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಮಾತನಾಡಿ, ಮನುಷ್ಯ ಕ್ರಿಯಾಶೀಲನಾಗಿದ್ದಾಗ ಮಾತ್ರ ಸಮಾಜ ಗೌರವಿಸುತ್ತದೆ. ಕೃಷಿಕರು ಶ್ರಮ ಜೀವಿಗಳು ಅವರಿಗೆ ಅಗತ್ಯ ಸೌಕರ್ಯಗಳನ್ನು ಸರ್ಕಾರ ಒದಗಿಸಿಕೊಡಬೇಕು.

ರೈತರಿಗೆ ಇತ್ತೀಚಿನ ದಿನಗಳಲ್ಲಿ ಎಣ್ಣೆಕಾಳು, ದ್ವಿದಳ ಧ್ಯಾನ್ಯ  ಸೇರಿದಂತೆ  ಆಹಾರ ಪದಾರ್ಥಗಳು ಬೆಳೆಯುವುದನ್ನು ಬಿಟ್ಟು ಅಡಕೆ ಬೆಳೆಗೆ ಮಾರು ಹೋಗಿದ್ದಾರೆ. ಆದರೆ ಒಂದು  ವೇಳೆ ಮಳೆ ಕೈ ಕೊಟ್ಟರೆ ಹತ್ತಾರು ವರ್ಷಗಳು ಸಾಕಿ ಬೆಳೆಸಿದ ಅಡಕೆ ಹಾಳಾಗುತ್ತಿದೆ.ಇದರಿಂದ ರೈತರ ಬದುಕು ಶೋಚನಿಯವಾಗುತ್ತದೆ ಆದ್ದರಿಂದ ಅಡಕೆ ಬಿಟ್ಟು ಆಹಾರ ಧಾನ್ಯಗಳನ್ನು ಬೆಳೆದು ದೇಶವನ್ನು ರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಕೃಷಿಕರನ್ನಾಗಿ ಮಾಡಲು ಇಷ್ಟಪಡುವುದಿಲ್ಲ. ವೈದ್ಯರು, ಇಂಜಿನಿಯರ್, ಸರ್ಕಾರಿ ನೌಕರನಿಗೆ ಗೌರವ ಸಿಗುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ. ಆದರೆ ರೈತ ಒಂದು ದಿನ ಆಹಾರ ಪದಾರ್ಥವನ್ನು ಬೆಳೆಯದೇ ಕೈ ಬಿಟ್ಟರೇ ದೇಶದ ಪರಿಸ್ಥಿತಿ ಏನಾಗುತ್ತದೆ ಎಂಬುವುದನ್ನು ಚಿಂತನೆ ಮಾಡಬೇಕು. ರೈತರನ್ನು ಗೌರವಿಸುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಆಧುನಿಕ ತಂತ್ರಜ್ಞಾನದಿಂದ ರೈತರು ಹೆಚ್ಚು ಯಂತ್ರೋಪಕರಣಗಳಿಗೆ ಅವಲಂಬನೆಯಾಗುವುದರಿಂದ ಕೃಷಿಗೆ ಮಾರಕವಾಗಲಿದೆ. ಈಗಾಗಲೇ ಕಣದಲ್ಲಿ ರೋಣಗಲ್ಲು ಕಾಣುತ್ತಿಲ್ಲ. ಕೆಲವು ಬೆಳೆಗಳನ್ನು ರಸ್ತೆಗಳಲ್ಲಿ ಹಾಕಿ ತುಳಿಸುವುದರಿಂದ ಅನೇಕ ರೋಗಗಳು ಹರಡಿ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದರು.

ಮಾಜಿ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ, ಐದು ಗ್ರಾ.ಪಂ ವ್ಯಾಪ್ತಿಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಯಾಗಿದೆ. ಕೃಷಿ ಕೇವಲ ವ್ಯವಸಾಯವಲ್ಲಾ ಉಪ ಕಸುಬುಗಳಾದ ಕುರಿ, ಜೇನು, ಹಸು ಸಾಕಾಣಿಕೆ ಸುಸ್ತಿರವಾಗಿ ಕೃಷಿ ಮಾಡಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ರೈತರು ಎತ್ತು, ಹಸು ಸಾಕುವುದು ಕಡಿಮೆಯಾಗಿದೆ. ದನದ ಗೊಬ್ಬರಕ್ಕಿಂತ ರಾಸಾಯನಿಕ ಗೊಬ್ಬರ ಹೆಚ್ಚು ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಾವಯವ ಕೃಷಿಯ ಕಡೆ ಒಲವು ತೋರಬೇಕು.

ಬೆಳೆಯುವ ಮುನ್ನ ಮಣ್ಣಿನ ಬಗ್ಗೆ ಕಾಳಾಜಿ ಹೊಂದಬೇಕು. ಮಣ್ಣಿನ ಪರೀಕ್ಷೆ ಮಾಡಿ ಆ ಭೂಮಿಗೆ ತಕ್ಕಂತ ಬೆಳೆ ಬೆಳೆಯುವುದರಿಂದ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರಿನಿವಾಸ್ ಚಿಂತಾಲ್ ಮಾತನಾಡಿ, ರೈತರನ್ನು ಸಂಘಟಿಸಿ, ಶಕ್ತಿ ಬರುವಂತೆ ಮಾಡಿ ಸಂಸ್ಕರಣೆ ಗೊಳಿಸಿ ಮಾರಾಟ ಮಾಡುವುದು ಈ ಸಂಸ್ಥೆಯ ಉದ್ದೇಶವಾಗಿದೆ ಎಂದರು.

ರೈತರ ಏಳಿಗೆಗೆ ಸಂಸ್ಥೆ ಶ್ರಮಿಸುತ್ತಿದೆ. ಮುಸುಕಿನಜೋಳ ಇತ್ತೀಚೆಗೆ ಸೋಮಾರಿಗಳ ಬೆಳೆಯಾಗಿ ಬದಲಾವಣೆಯಾಗಿದೆ. ಬಿತ್ತಿ ಕೊಯ್ಯುವವರೆಗೂ ಯಂತ್ರಗಳು ಔಷಧಿಗಳನ್ನುಬಳಸಲಾಗುತ್ತಿದೆ. ಅಂತರ,ಮಿಶ್ರ, ಹಂಚು ಬೆಳೆ ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಮುಸುಕಿನ ಜೋಳದಲ್ಲಿ ಕಡ್ಡಾಯವಾಗಿ ಅಂತರ ಬೆಳೆಯಾಗಿ ತೊಗರಿ ಬೆಳೆಯಬೇಕು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸಮತೋಷ್‍ಕುಮಾರ್, ಉಪ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ, ಕೆವಿಕೆ ಮುಖ್ಯಸ್ಥರಾದ ಡಾ. ದೇವೆರಾಜ್, ಬಿ.ಓ ಮಲ್ಲಿಕಾರ್ಜುನ, ಕೃಷಿ ಸಹಾಯಕ ನಿರ್ದೇಶಕ ಸಿ. ಮಿಥುನ್ ಕಿಮಾವತ್, ಗ್ರಾ.ಪಂ ಅಧ್ಯಕ್ಷೆ ಪವಿತ್ರಾ ವೀರೇಶ್, ಕೆಪಿಸಿಸಿ ಉಸ್ತುವಾರಿ ಕಲ್ಲೇಶ್ ರಾಜ್‍ಪಟೇಲ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪ. ಶೇಖರಪ್ಪ , ವಕೀಲ ಹಾಗೂ ಮುಖಂಡ ಬಿದರಕೆರೆ ನಾಗರಾಜ್  ಸೇರಿದಂತೆ ಮತ್ತಿತರಿದ್ದರು.

Share this Article
error: Content is protected !!