ಪ್ಲಾಸ್ಟಿಕ್ ಈ ಸಮಾಜಕ್ಕೆ ಅಂಟಿದ ಶಾಪ, ನಿರ್ಮೂಲನೆಗೆ ಕೈ ಜೋಡಿಸಿ!

Suddivijaya
Suddivijaya July 11, 2023
Updated 2023/07/11 at 12:42 PM

ಸುದ್ದಿವಿಜಯ, ಜಗಳೂರು:ಪ್ಲಾಸ್ಟಿಕ್ ಉತ್ಪನ್ನಗಳು ಈ ಸಮಾಜಕ್ಕೆ ಅಂಟಿದ ಶಾಪ. ಪರಿಸರ ಉಳಿವಿಗಾಗಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡಲು ಕೈ ಜೋಡಿಸಿ ಮುಕ್ತ ಪರಿಸರ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಗುರಿಯಾಗಬೇಕು ಎಂದು ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಮಹಮದ್‌ ಯೂನೂಸ್‌ ಅಥಣಿ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪಟ್ಟಣ ಪಂಚಾಯಿತಿ ಇವರ ಸಹಾಯೋಗದಲ್ಲಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್‌ ಮುಕ್ತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ ಪರಿಸರ ಅತ್ಯಮೂಲ್ಯವಾಗಿದೆ. ಅದನ್ನು ನಾವು ರಕ್ಷಣೆ ಮಾಡಿದರೆ ದೇಹದಲ್ಲಿ ಉಸಿರು ಇರುವವರೆಗೂ ನಮ್ಮನ್ನು ಕಾಪಾಡುತ್ತದೆ. ಮನೆ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಿದಂತೆ ಸಮಾಜದಲ್ಲಿರುವ ಕಸವನ್ನು ಸ್ವಚ್ಛಗೊಳಿಸಿ ಸುಂದರವಾದ ವಾತಾವರಣವನ್ನು ಕಲ್ಪಿಸಿದರೆ ಆರೋಗ್ಯಕರವಾದ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಅಧಿಕವಾಗಿದೆ. ಆಕರ್ಷಣೆಯ ರೂಪಿಸಿ ಜನರನ್ನು ಸೆಳೆಯುವ ಕೆಲಸ ಕೆಲ ಕಂಪನಿಗಳು ಮಾಡುತ್ತಿವೆ. ಅವುಗಳನ್ನು ಹೆಚ್ಚಾಗಿ ಮರು ಬಳಕೆ ಮಾಡುವುದರಿಂದ ಗಾಳಿ, ನೀರು, ಆಹಾರದ ಮೂಲಕ ಮನುಷ್ಯನ ದೇಹ ಸೇರಿ ಅನಾರೋಗ್ಯಕ್ಕೆ ತುತ್ತು ಮಾಡುತ್ತದೆ. ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಬಳಕೆಯಿಂದ ಅಂತರ ಕಾಪಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಪ.ಪಂ ಮುಖ್ಯಾಧಿಕಾರಿ ಲೋಕ್ಯನಾಯ್ಕ ಮಾತನಾಡಿ, ಪ್ರತಿ ನಿತ್ಯ ಮುಂಜಾನೆಯಲ್ಲಿ  ಹಾಲು, ಸೊಪ್ಪು, ತರಕಾರಿ, ದವಸ ಧಾನ್ಯಗಳನ್ನು ಖರೀದಿಸಲು ಬರುವ ಗ್ರಾಹಕರು ಕಡ್ಡಾಯವಾಗಿ ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ಕೈಯಲ್ಲಿ ತಂದರೆ ಪ್ಲಾಸ್ಟಿಕ್‌ ಮುಕ್ತ ಮಾಡಲು ಸಹಕಾರಿಯಾಗುತ್ತದೆ. ಪ್ಲಾಸ್ಟಿಕ್‌ ಗೆ ಅವಲಂಬಿತರಾದರೇ ಜೀವನದಲ್ಲಿ ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಓಂಕಾರಪ್ಪ, ಕಾರ್ಯದರ್ಶಿ ತಿಪ್ಪೇಸ್ವಾಮಿ, ವಕೀಲರಾದ ಬಸವರಾಜಪ್ಪ, ಆರ್.‌ ಓಬಳೇಶ್‌, ಸಣ್ಣ ಓಬಯ್ಯ,  ರುದ್ರೇಶ್‌, ಬಸವರಾಜ್‌, ಪ.ಪಂ ಆರೋಗ್ಯ ನಿರೀಕ್ಷಕ ಕಿಫಾಯಿತ್‌ ಸೇರಿದಂತೆ ಮತ್ತಿತರಿದ್ದರು.

ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪಟ್ಟಣ ಪಂಚಾಯಿತಿ ಇವರ ಸಹಾಯೋಗದಲ್ಲಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್‌ ಮುಕ್ತ ಅಭಿಯಾನ ಕಾರ್ಯಕ್ರಮಕ್ಕೆ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಮಹಮದ್‌ ಯೂನೂಸ್‌ ಅಥಣಿ  ಉದ್ಘಾಟಿಸಿದರು

Share this Article
Leave a comment

Leave a Reply

Your email address will not be published. Required fields are marked *

error: Content is protected !!