ಸುದ್ದಿವಿಜಯ, ಜಗಳೂರು: ಹುಬ್ಬಳ್ಳಿ ಪೊಲೀಸರಿಗೆ ತಲೆ ನೋವಾಗಿದ್ದ ಆರೋಪಿಯನ್ನು ಜಗಳೂರು ಪಟ್ಟಣದ ಪೊಲೀಸ್ ದಫೇದಾರ್ ಕುಮಾರಸ್ವಾಮಿ ಮತ್ತು ಪೊಲೀಸ್ ಪೇದೆ ಚಾಮರಾಜರೆಡ್ಡಿ ಹಿಡಿದು ಕೋರ್ಟ್ ಒಪ್ಪಿಸಿದ್ದು ಹುಬ್ಬಳ್ಳಿ ನ್ಯಾಯಾಧೀಶರು ಕರ್ತವ್ಯಕ್ಕೆ ಮೆಚ್ಚಿ ಒಂದು ಸಾವಿರ ರೂ ಬಹುಮಾನ ಘೋಷಣೆ ಮಾಡಿದ್ದಾರೆ.
ಘಟನೆ ವಿವರ: ತಾಲೂಕಿನ ಗೌಡಗೊಂಡನಹಳ್ಳಿಯ ಬಸವರಾಜ್ ಅಲಿಯಾಸ್ ಕಪ್ಪೆಬಸವರಾಜ್ ಎಂಬ ವ್ಯಕ್ತಿ ಹುಬ್ಬಳ್ಳಿಯ ಖಾಸಗಿ ಫೈನಾಸ್ಸ್ ಕಂಪನಿ ಮೂಲಕ ಚಕ್ ಕೊಟ್ಟು ಟ್ರ್ಯಾಕ್ಟರ್ ಖರೀದಿಸಿದ್ದ. ಕಂತು ಕಟ್ಟದೇ ವಂಚಿಸಿದ್ದ ಹೀಗಾಗಿ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಫೈನಾನ್ಸ್ ಕಂಪನಿಯವರು ಚಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.ಹಾಗಾಗಿ ಕಪ್ಪೆ ಬಸವರಾಜ್‍ಗೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಆದರೆ ಹುಬ್ಬಳ್ಳಿ ಪೊಲೀಸರು ಎಷ್ಟು ಹುಡುಕಿದರೂ ಬಸವರಾಜ್ ಪತ್ತೆಯಾಗಲಿಲ್ಲ. ವೇಷ ಮರೆಸಿಕೊಂಡು ಚಿತ್ರದುರ್ಗದ ಹೋಟೆಲ್‍ವೊಂದರಲ್ಲಿ ಸಪ್ಲೇಯರ್ ಆಗಿ ಕೆಲಸಕ್ಕೆ ಸೇರಿದ್ದ.
ಒಂದೂವರೆ ವರ್ಷದಿಂದ ಹುಬ್ಬಳ್ಳಿ ಪೊಲೀಸರಿಗೆ ಪತ್ತೆಯಾಗದ ವ್ಯಕ್ತಿಯನ್ನು ಜಗಳೂರು ಪಟ್ಟಣದ ದಫೇದಾರ್ ಕುಮಾರಸ್ವಾಮಿ ಮತ್ತು ಚಾಮರಾಜರೆಡ್ಡಿ ಉಪಾಯ ಮಾಡಿ ಆರೋಪಿಯ ಚಲನವಲನಗಳ ಮೇಲೆ ನಿಗಾವಹಿಸಿ ಚಿತ್ರದುರ್ಗದಲ್ಲಿ ಕಳೆದ ಅಕ್ಟೋಬರ್ 17 ರಂದು ಬಂಧಿಸಿದ್ದಾರೆ. ನಂತರ ಬಸವರಾಜನನ್ನು ಹುಬ್ಬಳ್ಳಿಯ ಪೊಲೀಸರಿಗೆ ಒಪ್ಪಿಸಿದ್ದಾರೆ.ಕೋರ್ಟ್‍ನಲ್ಲಿ ದಫೇದಾರ್ ಕುಮಾರಸ್ವಾಮಿ ಮತ್ತು ಚಾಮರಾಜರೆಡ್ಡಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನ್ಯಾಯಾಧೀಶರು ಅವರಿಗೆ ಒಂದು ಸಾವಿರ ರೂ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
ಕರ್ತವ್ಯವೇ ದೇವರು ಎಂದು ಕುಟುಂಬದ ಸ್ವಾತಂತ್ರ್ಯ ಮೊಟಕುಗೊಳಿಸಿ ಅವರು ಮಾಡಿದ ಸಾಧನೆಗೆ ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿರುವುದು ಪೊಲೀಸ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.