PSI ಎಸ್.ಡಿ.ಸಾಗರ್ ವರ್ಗಾವಣೆ: ಜಗಳೂರು ಠಾಣೆಯಲ್ಲಿ ಬೀಳ್ಕೊಡುಗೆ

Suddivijaya
Suddivijaya August 11, 2024
Updated 2024/08/11 at 5:14 PM

Suddivijayanews11/08/2024

ಸುದ್ದಿವಿಜಯ, ಜಗಳೂರು: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸಿದ್ದ ಸರಳ, ದಕ್ಷ ಅಧಿಕಾರಿ ಎಸ್.ಡಿ.ಸಾಗರ್ ಹಾವೇರಿ ಜಿಲ್ಲೆಯ ಕಾಗಿನೆಲೆ ಪೊಲೀಸ್ ಠಾಣೆಗೆ ವರ್ಗಾವಣೆಯಾದ ಹಿನ್ನೆಲೆ ಭಾನುವಾರ ಠಾಣೆ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ಸ್ ಸ್ಪೆಕ್ಟರ್ (PI) ಡಿ.ಶ್ರೀನಿವಾಸ್ ರಾವ್, ನಾವು ಮಾಡುವ ಕೆಲಸವನ್ನು ಸಾರ್ವಜನಿಕರು ಧನಾತ್ಮಕ ರೀತಿಯಲ್ಲಿ ಮಾತನಾಡಬೇಕು.

ಉಳಿಪೆಟ್ಡು ಬಿದ್ದರಷ್ಟೇ ಮೂರ್ತಿ ಸುಂದರವಾಗಿ ಹೇಗೆ ಮೂಡಿ ಬರುತ್ತದೋ ಹಾಗೆ ಶ್ರಮವಹಿಸಿ ಸಾರ್ವಜನಿಕ ಜೀವನದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಜನ ರಕ್ಷಕನಾಗಿ ದುಡಿದರೆ ಅದೇ ಸಾರ್ಥಕವಾದ ಕೆಲಸ.

ಈ ನಿಟ್ಟಿನಲ್ಲಿ ಪಿಎಸ್ಐ ಸಾಗರ್ ಅತ್ಯದ್ಭುತವಾಗಿ ಕೆಲಸ ಮಾಡಿದ್ದಾರೆ. ಅಷ್ಟೇಅಲ್ಲ ಅವರು ಜಗಳೂರು ಠಾಣೆಗೆ ಬಂದಾಗ ಬಾಕಿ ಉಳಿದಿದ್ದ 500 ಕೇಸ್ ನಲ್ಲಿ 226 ಕೇಸ್ ಕೊಟ್ಟಿದ್ದೆವು.

ಕಳೆದ ಎರಡು ವರ್ಷಗಳಲ್ಲಿ 221 ಕೇಸ್ ಗಳನ್ನು ಮುಕ್ತಾಯ ಮಾಡಿರುವುದು ದಕ್ಷತೆಗೆ ಸಾಕ್ಷಿಯಾಗಿದೆ.ಅವರು ನನ್ನ ಬಲಗೈ ಮತ್ತು ಬಲಗಣ್ಣಿನಂತಿದ್ದರು. ಆತ್ಮೀಯವಾಗಿ ಜನ ಸ್ನೇಹಿಯಾಗಿ ಕೆಲಸ ಮಾಡಿದ್ದಾರೆ.

ಉತ್ತಮ ಕೆಲಸ ಮಾಡಿದರಷ್ಟೇ ಜನರು ಒಳ್ಳೆಯ ಮಾತುಗಳನ್ನಾಡುತ್ತಾರೆ.

ಇದಕ್ಕೆ ಸಾಕ್ಷಿ ಎಸ್.ಡಿ.ಸಾಗರ್ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಗಳೂರು ಠಾಣೆಯಿಂದ ಒಟ್ಟು 11 ಜನ ಸಿಬ್ಬಂದಿ ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆಯಾಗಿದ್ದಾರೆ.

ನಾವು ಎಲ್ಲೇ ಹೋದರು ಜನ ಸ್ನೇಹಿಯಾಗಿ ಅವಿನಾಭಾವದಿಂದ ಕೆಲಸ ಮಾಡಬೇಕು. ತಾಳ್ಮೆಯಿಂದ  ಕೆಲಸ ಮಾಡಬೇಕು ಎಂದು ಹೇಳಿದರು.

ವರ್ಗಾವಣೆಯಾದ ಸಬ್ ಇನ್ಪೆಕ್ಟರ್ (PSI) ಎಸ್.ಡಿ.ಸಾಗರ್ ಮಾತನಾಡಿ, ಎರಡು ವರ್ಷಗಳ ಹಿಂದೆ ಈ ಠಾಣೆಗೆ ಬಂದಾಗ ಠಾಣೆಯ ಸ್ಥಿತಿ ಶೋಚನೀಯವಾಗಿತ್ತು.

ಪಿಐ ಡಿ.ಶ್ರೀನಿವಾಸ್ ರಾವ್ ವರ್ಗಾವಣೆಯಾಗಿ ಬಂದ ನಂತರ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಕೇಸ್ ಕಡಿಮೆಯಾಗಿವೆ.

ನನಗೆ ಅಣ್ಣನಂತೆ ನಮ್ಮನ್ನೆಲ್ಲಾ ನೋಡಿಕೊಂಡು ಮಾರ್ಗದರ್ಶನ ನೀಡಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ತಾಯಿ ಹೃದಯದ ಅವರು ಜಗಳೂರು ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಕ್ರೈಂ ಕಂಟ್ರೋಲ್ ಮಾಡುವಲ್ಲಿ ಸಾಕಷ್ಟು ಶ್ರಮಿಸಿಸಿದ್ದಾರೆ.

ಇಲ್ಲಿನ ಜನ ಮುಗ್ದರಿದ್ದಾರೆ. ಇನಷ್ಟು ದಿನ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರೆ ಇರಬಹುದಿತ್ತು.

ಆದರೆ ಪೊಲೀಸ್ ಕೆಲಸ ಎಂದರೆ ವರ್ಗಾವಣೆ ಅನಿವಾರ್ಯ. ಕಾಗಿನೆಲೆ ಠಾಣೆಯಲ್ಲೂ ಇದೇ ರೀತಿ ಕೆಲಸ ಮಾಡುವೆ ಎಂದು ಹೇಳಿದರು.

ಸಬ್ ಇನ್ಪೆಕ್ಟರ್ ಮಂಜುನಾಥ್ ಸ್ವಾಮಿ ಮಾತನಾಡಿ,  ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ, ಇಸ್ಪೀಟ್ ದಂಧೆಗೆ ಬ್ರೇಕ್ ಬೀಳಲು ಎಸ್.ಡಿ. ಸಾಗರ್ ಅವರ ಕಾರ್ಯ ಕ್ಷಮತೆ ಕಾರಣ ಎಂದರು.

ಸಬ್ ಇನ್ಪೆಕ್ಟರ್ ಆಶಾ ಮಾತನಾಡಿ, ಎಸ್.ಡಿ.ಸಾಗರ್ ಪಾದರಸದಂತೆ, ಜನ ಸ್ನೇಹಿಯಾಗಿ ಕಾರ್ಯನಿರ್ವಹಿಸಿ ವರ್ಗಾವಣೆಯಾಗುತ್ತಿರುವುದು ಸಾಕಷ್ಟು ಬೇಸರ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಯಾದ ಸಿಬ್ಬಂದಿಗಳಾದ ನಾಗಭೂಷಣ್, ರಮೇಶ್, ಬಸವರಾಜ್, ಚಾಮರಾಜರೆಡ್ಡಿ, ವಿಜಯ್ ಮತ್ತು ನಾಗರಾಜ್ ಅವರನ್ನು ಪಿಐ ಶ್ರೀನಿವಾಸ್ ರಾವ್ ಮತ್ತು ಎಲ್ಲ ಸಿಬ್ಬಂದಿ ಸನ್ಮಾನಿಸಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!