ಸುದ್ದಿವಿಜಯ, ಜಗಳೂರು: ಕೃಷಿ ಪಂಪ್‍ಸೆಟ್‍ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲವೆಂದು ಆರೋಪಿಸಿ ತಾಲೂಕಿನ ತೋರಣಗಟ್ಟೆ, ಕೆಳಗೋಟೆ ಗ್ರಾಮಸ್ಥರು ಬೆಸ್ಕಾಂ ಎಇಇ ಸುಧಾಮಣಿ ಅವರನ್ನು ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದರು.
ಬೆಳಗ್ಗೆ ಬಯಲು ರಂಗಮಂದಿರ ಬಳಿ ಇರುವ ನೂತ ಬೆಸ್ಕಾಂ ಕಚೇರಿಗೆ ಧಾಮಿಸಿದ ರೈತರು ಅಧಿಕಾರಿಗಳ ಕಾರ್ಯವೈಖರಿಯ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಬಹುತೇಕ ಮಳೆಯನ್ನೆ ನಂಬಿಕೊಂಡು ಕೃಷಿ ಮಾಡಲಾಗುತ್ತದೆ. ಆದರೆ ಈ ವರ್ಷ ಮುಂಗಾರು ಆರಂಭದಿಂದಲೂ ಸರಿಯಾಗಿ ಮಳೆ ಬಾರದೇ ಬಿತ್ತನೆ ಮಾಡಿದ ಮೆಕ್ಕೆಜೋಳ, ಶೇಂಗಾ, ರಾಗಿ, ಹತ್ತಿ ಸೇರಿದಂತೆ ಎಲ್ಲ ಬೆಳೆಗಳು ಸಂಪೂರ್ಣ ಒಳಗಿ ಹಾಳಾಗಿವೆ.
ಜಮೀನಿಗೆ ಹಾಕಿರುವ ಬಂಡವಾಳ ಸಹ ಸಿಕ್ಕುವುದಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟದಲ್ಲಿ ವರ್ಷವೆಲ್ಲಾ ಜೀವನ ಹೇಗೆ ನಡೆಸಬೇಕು ಎಂಬ ಚಿಂತೆಯಾಗಿದೆ. ಇದರ ನಡುವೆ ಪದೇ ಪದೆ ವಿದ್ಯುತ್ ವ್ಯತ್ಯಯವಾದರೆ ಹೇಗೆ? ಎಂದು ರೈತರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಕೆಳಗೋಟೆ ಸಿದ್ದೇಶ್ ಮಾತನಾಡಿ, ಕೆಳಗೋಟೆ ಗ್ರಾಮದಲ್ಲೂ ಕೂಡ ಹಗಲಿನಲ್ಲಿ ಕರೆಂಟ್ ಇರುವುದಿಲ್ಲ. ರಾತ್ರಿಯಲ್ಲಿ 3 ಗಂಟೆ ಸಮಯದಲ್ಲಿ ವಿದ್ಯುತ್ ಕೊಟ್ಟರೆ ನಾವು ಯಾವಾಗ ಬೆಳೆಗಳಿಗೆ ನೀರಾಯಿಸಬೇಕು, ಕರಡಿ, ಚಿರತೆ, ಹಂದಿ, ವಿಷ ಜಂತುಗಳ ಕಾಟದಿಂದ ರಾತ್ರಿ ವೇಳೆ ಒಂಟಿಯಾಗಿ ಓಡಾಡಲು ಭಯವಾಗುತ್ತದೆ.
ಅಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ನಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು, ನಾಳೆಯಿಂದಲೇ ನಮಗೆ ಹಗಲು ವಿದ್ಯುತ್ ಪೂರೈಕೆ ಮಾಡಬೇಕು, ಇಲ್ಲದಿದ್ದರೇ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತೋರಣಗಟ್ಟೆ, ರಾಮಕೃಷ್ಣ, ತಿಮ್ಮಣ್ಣ, ಮಾರುತಿ, ರಾಮಮೂರ್ತಿ, ಕೆಳಗೋಟೆ, ನಾಗಣ್ಣ, ಮಾಲೀಕ್, ಅಂಜಿನಪ್ಪ, ಅಹಮದ್ ಅಲಿ, ನವೀನ್ ಸೇರಿದಂತೆ ಮತ್ತಿತರಿದ್ದರು.