ಸುದ್ದಿವಿಜಯ, ಜಗಳೂರು: ಪಟ್ಟಣದ ಬಯಲು ರಂಗಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಾ.10 ರಂದು ಶುಕ್ರವಾರ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರಜಾಧ್ವನಿ ಯಾತ್ರೆ ನಡೆಯಲಿದೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ತಿಳಿಸಿದರು.
ಪಟ್ಟಣದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಸಂಜೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅಂದಾಜು 20 ಸಾವಿರಕ್ಕೂ ಅಧಿಕ ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಡಬಲ್ ಎಂಜಿನ್ ಸರಕಾರದ 40 ಪರ್ಸೆಂಟೇಜ್ ಭ್ರಷ್ಟಾಚಾರದ ಕರ್ಮಕಾಂಡದ ಬಗ್ಗೆ ಜನರಿಗೆ ತಿಳಿಸುವುದು ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ. ನಮ್ಮ ಸರಕಾರದ ಅವಧಿಯಲ್ಲಿ ಜಗಳೂರು ಕ್ಷೇತ್ರದ ಅಭಿವೃದ್ಧಿ ಹೇಗಾಯಿತು ಎಂಬುದು ಜನರಿಗೆ ತಿಳಿಸುವ ಉದ್ದೇಶ ಈ ಸಭೆ ನಡೆಯಲಿದೆ.
ನಮ್ಮ ಸರಕಾರದ ಮೂರು ಯೋಜನೆಗಳಾದ ಪಡಿತರ ಚೀಟಿ ಹೊಂದಿದ ಎಲ್ಲರಿಗೂ ಉಚಿತ 10 ಕೆಜಿ ಅಕ್ಕಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ ಅಡಿ 2000 ರೂ ಮಾಸಿಕ ನೀಡುವ ಯೋಜನೆ ಮತ್ತು 200 ಯುನಿಟ್ ವರೆಗೆ ಉಚಿತ ಗೃಹ ಜ್ಯೋತಿ ಯೋಜನೆಗಳ ಗ್ಯಾರಂಟಿ ಕಾರ್ಡ್ ನೀಡಲಾಗುವುದು.
ಈ ಹಿಂದೆ ಸಿದ್ದರಾಮಯ್ಯನವರ ಸರಕಾರದ ತಮ್ಮ ಅಧಿಕಾರದವಧಿಯಲ್ಲಿ ಬಡವರ ಪರ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದರು. ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಹೇಳಲಾಗಿದ್ದ ಎಲ್ಲ ಯೋಜನೆಗಳನ್ನು ಜಾರಿಗೆ ತಂದರು. ಆದರೆ ಈಗಿನ ಸರಕಾರ ಬಡವರ ವಿರೋಧಿ ಸರಕಾರ ಎಂದರು.
ಪ್ರಜಾಧ್ವನಿಯಾತ್ರೆಗೆ ಕ್ಷೇತ್ರದ 29 ಗ್ರಾಪಂಗಳಿಂದ ಕಾರ್ಯಕರ್ತರ ಆಗಮನಕ್ಕೆ ಬಸ್, ಟ್ಯಾಕ್ಟರ್ ಸೇರಿ ವಿವಿಧ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮಡ್ರಳ್ಳಿ ಮತ್ತು ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮೀಗಳ ರಥೋತ್ಸವ ಇರುವ ಕಾರಣ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹೆಲಿಕಾಪ್ಟರ್ನಲ್ಲಿ ನಾಯಕರು ಆಗಮಿಸಲಿದ್ದಾರೆ. ಈಗಾಗಲೇ ಎಲ್ಲ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಜಮೀರ್ಅಹ್ಮದ್ಖಾನ್, ಎಂ.ಬಿ.ಪಾಟೀಲ್, ಎಚ್.ಆಂಜನೇಯ ಸೇರಿದಂತೆ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠೀಯಲ್ಲಿ ಮುಖಂಡರಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಕೆ.ಪಿ.ಪಾಲಯ್ಯ, ಕೆಪಿಸಿಸಿ ಜಗಳೂರು ಉಸ್ತುವಾರಿ ಕಲ್ಲೇಶ್ ರಾಜ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಬಿದರಕೆರೆ ವೀರೇಶ್, ತಿಪ್ಪೇಸ್ವಾಮಿ ಗೌಡ, ಯು.ಜಿ.ಶಿವಕುಮಾರ್, ಪಲ್ಲಾಗಟ್ಟೆ ಶೇಖರಪ್ಪ, ಗಿರೀಶ್ ಒಡೆಯರ್, ಗೋಡೆ ಪ್ರಕಾಶ್ ಸೇರಿದಂತೆ ಅನೇಕರು ಇದ್ದರು.