ಸುದ್ದಿವಿಜಯ, ಜಗಳೂರು: ತಾಲೂಕಿನ ನಿಬಗೂರು ಗ್ರಾಮದ ಬಳಿ ಭಾನುವಾರ ಸಂಜೆ 8.30ರ ಸುಮಾರಿಗೆ ಮರಳುದಂಧೆ ಕೋರರು ಕಟ್ಟಿಗೆಹಳ್ಳಿ ಗ್ರಾಮದ ಕೆ.ಆರ್.ಅಣ್ಣೇಶ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಗ್ರಾಮಸಹಾಯಕರಾಗಿ ಕೆಲಸ ಮಾಡುತ್ತಿದ್ದ ಕೆ.ಆರ್.ಅಣ್ಣೇಶ್ ಹಲ್ಲೆಗೊಳಗಾದ ವ್ಯಕ್ತಿ. ಬಿದರಕೆರೆ -ದೊಣೆಹಳ್ಳಿ ಮಾರ್ಗವಾಗಿ ಮಿನಿಟ್ರಾಕ್ಟರ್ ನಲ್ಲಿ ಮರಳು ತುಂಬಿಕೊಂಡು ಹೋಗುತ್ತಿದ್ದಾಗ ನಿಬಗೂರು ಗ್ರಾಮದ ಬಳಿ ʼಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ಹೋಗುತ್ತಿರುವುದು ಏನುʼ? ಎಂದು ಕೆ.ಆರ್.ಅಣ್ಣೇಶ್ ವಿಚಾರಿಸಿದ್ದಾರೆ.
‘ಕೇಳಲು ನೀನು ಯಾರು’? ಎಂದು ಏಕಾ ಏಕಿ ನಾಲ್ವರು ಹಿಗ್ಗಾಮಗ್ಗ ಥಳಿಸಿದ್ದರಿಂದ ಅಣ್ಣೇಶ್ ಅವರ ಮೂಗು-ಬಾಯಲ್ಲಿ ರಕ್ತ ಸ್ರಾವವಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಣ್ಣೇಶ್‌ನನ್ನು ಸ್ಥಳೀಯರು ಉಪಚರಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗೌರಮ್ಮನಹಳ್ಳಿ ಮಂಜುನಾಥ್, ರಸ್ತೆಮಾಕುಂಡೆ ಗೊಲ್ಲರಹಟ್ಟಿಯ ವ್ಯಕ್ತಿ ಸೇರಿದಂತೆ ನಾಲ್ವರ ಮೇಲೆ ಕೇಸ್ ದಾಖಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವ್ಯಾಪಕವಾಗಿ ನಡೆಯುತ್ತಿದೆ ಮರಳು ದಂಧೆ?: ಮಳೆ ಹೆಚ್ಚಾಗಿದ್ದು ಹಳ್ಳಕೊಳ್ಳಗಳಲ್ಲಿ ಮರಳು ಹರಿದು ಬರುತ್ತಿದೆ. ಸುಲಭವಾಗಿ ಸಿಗುತ್ತಿರುವ ಮರಳನ್ನು ದಂಧೆ ಕೋರರು ಎಗ್ಗಿಲ್ಲದೇ ಸಾಗಿಸುತ್ತಿದ್ದಾರೆ.
ಪೊಲೀಸರ ಕಣ್ಗಾವಲಿಟ್ಟರೂ ಸಹ ರಾತ್ರಿ ಮತ್ತು ಸಂಜೆಯ ಹೊತ್ತು ತಾಲೂಕಿನ ವಿವಿಧ ಗ್ರಾಮಗಳಲ್ಲಿ ವ್ಯಾಪಕವಾಗಿ ಮರಳು ದಂಧೆ ನಡೆಯುತ್ತಿದೆ.
ತಹಶೀಲ್ದಾರ್ ಜಿ.ಸಂತೋಷ್‌ಕುಮಾರ್ ಮರಳು ದಂಧೆ ಕೋರರ ಬಗ್ಗೆ ಪೊಲೀಸರಿಗೆ ಬಿಗಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಆದರೂ ಟ್ರ್ಯಾಕ್ಟರ್, ಟಾಟಾ ಏಸ್ ಸೇರಿದಂತೆ ವಿವಿಧ ವಾಹನಗಳಲ್ಲಿ ಮರಳು ಸಾಗಾಟ ನಡೆಯುತ್ತಿದೆ. ಹಲ್ಲೆಕೋರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.