suddivijayanews26/08/2024
ಸುದ್ದಿವಿಜಯ, ಜಗಳೂರು: ಶ್ರಾವಣಮಾಸದ ಕೊನೆಯ ಸೋಮವಾರ ಹಿನ್ನೆಲೆ ತಾಲೂಕಿನ 24 ಗೊಲ್ಲರಹಟ್ಟಿಯ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ರಾಷ್ಟ್ರೀಯ ಹೆದ್ದಾರಿ ಕಲ್ಲೇದೇವರಪುರ ಮತ್ತು ಬೆಣ್ಣೆಹಳ್ಳಿ ಮಧ್ಯೆಯಿರುವ ಬೊಮ್ಮಗಟ್ಟೆ ಕಾಟಜ್ಜಗೆ ವಿಶೇಷ ಪೂಜೆ ಸಲ್ಲಿಸಿದರು.
ಪ್ರತಿವರ್ಷ ತಾಲೂಕಿನ 24 ಗೊಲ್ಲರಹಟ್ಟಿ ಭಕ್ತರು ಎತ್ತಿನ ಬಂಡಿಗಳಲ್ಲಿ ಪಾದ ರಕ್ಷೆ ಧರಿಸದೇ ಬೊಮ್ಮಗಟ್ಟೆ ಕಾಟಜ್ಜನಿಗೆ ಬಂದು ವಿಶೇಷ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದ್ದು ಸಹಸ್ರಾರು ಸಂಖ್ಯೆಯ ಭಕ್ತರು ಇಲ್ಲಿ ತಮ್ಮ ಇಷ್ಟಾರ್ಥಗಳನ್ನು ಈಡೇರುಸುವಂತೆ ಪೂಜಿಸುತ್ತಾರೆ.
ಅಣಬೂರು ಗೊಲ್ಲರಹಟ್ಟಿಯ ಭಕ್ತರ ನೇತೃತ್ವದಲ್ಲಿ ನೂರಾರು ಎತ್ತಿನ ಬಂಡಿಗಳಲ್ಲಿ ಆಗಮಿಸುವ ಭಕ್ತರು ಪವಾಡಪುರಷ ಬೊಮ್ಮಗಟ್ಟ ಕಾಟಜ್ಜನಿಗೆ ಅಣಬೂರಿನಿಂದ ಮೀಸಲು ಹಾಲು ಮೀಸಲು ಅನ್ನ ಎಡೆ ತರುತ್ತಾರೆ.
ಅಣಬೂರಿನ ಪಟ್ಟದ ಪೂಜಾರಿಗಳು ಪೂಜೆ ಮಾಡಿದ ನಂತರ ತಾಲೂಕಿನ 24 ಗೊಲ್ಲರಹಟ್ಟಿಯ ಜನರು ಮಡಿ ಮೈಲಿಗೆಯಲ್ಲಿ ಬಂದು ಅಜ್ಜನಿಗೆ ತಮ್ಮ ಭಕ್ತಿ ಸಮರ್ಪಣೆ ಮಾಡುವುದು ಪ್ರತಿ ವರ್ಷ ಇಲ್ಲಿನ ಸಂಪ್ರದಾಯವಾಗಿದೆ.
ಪೂಜಾ ಕಾರ್ಯಕ್ರಮಕ್ಕೆ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ.ರಾಜೇಶ್, ಕೆಪಿಸಿಸಿ ಎಸ್.ಟಿ.ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್ ಸೇರಿದಂತೆ ಅನೇಕ ಮುಖಂಡರು ಬೊಮ್ಮಗಟ್ಟೆ ಕಾಟಜ್ಜನಿಗೆ ವಿಶೇಷ ಪೂಜೆ ಸಲ್ಲಿಸಿದರು.