suddivijayanews2/8/2024
ಸುದ್ದಿವಿಜಯ, ಜಗಳೂರು:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ತೀರ ಹಿಂದುಳಿದ ಉಪ ವರ್ಗಗಳಿಗೆ ಒಳ ಮೀಸಲು ಕಲ್ಪಿಸುವ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಐತಿಹಾಸಿ ತೀರ್ಪು ನೀಡಿರುವುದಕ್ಕೆ ಜಗಳೂರು ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಮಾದಿಗ ಸಮುದಾಯ ಮುಖಂಡರು ಶುಕ್ರವಾರ ಸಂಭ್ರಮಿಸಿದರು.
ಇದೇ ವೇಳೆ ಕರ್ನಾಟಕ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಕುಬೇರಪ್ಪ ಮಾತನಾಡಿ, ಮೂರು ದಶಕಗಳ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಪರಿಶಿಷ್ಟರ ಉಪಜಾತಿ ವರ್ಗೀಕರಣ ಮಾಡುವ ಹಕ್ಕು ರಾಜ್ಯಗಳಿಗೆ ಇದೆ.
ಸಂವಿಧಾನದ 14ನೇ ವಿಧಿ ಅನ್ವಯ ರಾಜ್ಯಗಳೇ ಜಾತಿ ಪಟ್ಟಿ ವಿಂಗಡಿಸಬಹುದು ಎಂದು ತೀರ್ಪು ನೀಡಿರುವುದು ಮಾದಿಗ ಸಮುದಾಯಕ್ಕೆ ಸಂತೋಷ ತಂದಿದೆ.
ಇದರಿಂದ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಈ ಮೀಸಲು ವ್ಯವಸ್ಥೆ ಜಾರಿ ಮಾಡಬಹುದು. ಇದಕ್ಕಾಗಿ ಜಾತಿಗಳ ಉಪ ವರ್ಗೀಕರಣ ಮಾಡಬಹುದಾಗಿದೆ.
ಅಸಂಖ್ಯಾತ ದಲಿತರು, ಶೋಷಿತರಿಗೆ ಇದರಿಂದ ನ್ಯಾಯ ಸಿಕ್ಕಂತಾಗಿದೆ. ಸುಪ್ರೀಂ ಕೋರ್ಟ್‍ನ ಈ ಆದೇಶದಿಂದ ತುಳಿತಕ್ಕೆ ಒಳಗಾಗಿರುವ ಪರಿಶಿಷ್ಟ ಉಪಜಾತಿಗಳಿಗೆ ನ್ಯಾಯಸಿಕ್ಕಂತಾಗಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು.
ಈ ವೇಳೆ ಮಾದಿಗ ಸಮುದಾಯದ ಮುಖಂಡರಾದ ಜಿ.ಎಚ್.ಶಂಭುಲಿಂಗಪ್ಪ, ಸಿ.ತಿಪ್ಪೇಸ್ವಾಮಿ, ಗ್ಯಾಸ್ ಓಬಣ್ಣ, ಡಿಎಸ್‍ಎಸ್ ಸಂಚಾಲಕ ಮಲೆಮಾಚಿಕೆರೆ ಸತೀಶ್, ಸಿ.ಎಂ ಹೊಳೆ ಮಾರುತಿ, ವೀರಸ್ವಾಮಿ, ಅಣಬೂರು ರೇಣುಕೇಶ್, ವಿಜಯ್ ಕೆಂಚೋಳ್ ಇದ್ದರು.