ಸುದ್ದಿವಿಜಯ, ಜಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಕ್ಕಳಿಲ್ಲದ ಶಾಲೆಗಳನ್ನು ಮುಚ್ಚುವ ಅಭಿಪ್ರಾಯ ವ್ಯಕ್ತಪಡಿಸಿರುವುದು ಅಪಾಯಕಾರಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಲೇಖಕ ಕುಂ.ವೀರಭದ್ರಪ್ಪ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಸಿ ‘ಆದರ್ಶ ಶಿಕ್ಷಕರು ಹೇಗಿರಬೇಕು?’ ಎಂಬ ವಿಶೇಷ ಉಪನ್ಯಾಸದಲ್ಲಿ ಅಭಿಪ್ರಾಯಪಟ್ಟರು.
ಮಕ್ಕಳ ಕೊರತೆ ಇರುವ ಸರಕಾರಿ ಶಾಲೆಗಳನ್ನು ಮುಚ್ಚುವ ಕ್ರಮ ಹೆಂಡತಿ ರೋಗಿ ಎಂದು ಮತ್ತೊಂದು ಮದುವೆಯಾಗಲು ಸಾಧ್ಯವೇ? ಆರೋಗ್ಯ ಸರಿಯಿಲ್ಲ ಎಂದರೆ ಚಿಕಿತ್ಸೆ ಕೊಡಿಸುತ್ತೇವೆ. ಅದೇ ರೀತಿ ಸರಕಾರಿ ಶಾಲೆಗಳು ಸೊರಗುತ್ತಿದ್ದರೆ ಅವುಗಳಿಗೆ ಮೂಲಸೌಕರ್ಯ ಕಲ್ಪಿಸುವ ಮೂಲಕ ಅಭಿವೃದ್ಧಿ ಪಡಿಸಬೇಕೇ ವಿನಃ ಮತ್ತೊಂದು ಶಾಲೆಗೆ ವಿಲೀನ ಗೊಳಿಸುವ ಮೂಲಕ ಸೊರಗಿರುವ ಶಾಲೆಗಳನ್ನು ಮುಚ್ಚಿದರೆ ಅದು ದ್ರೋಹದ ಕೆಲಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕಾರಣಿಗಳು ಎಲ್ಲಿಯವರೆಗೆ ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವುದಿಲ್ಲವೋ ಅಲ್ಲಿಯವರೆಗೆ ಸರಕಾರಿ ಶಾಲೆಗಳು ಉದ್ದಾರವಾಗಲ್ಲ. ನಾನು 30 ವರ್ಷಗಳ ಕಾಲ ಮೂಲಸೌಕರ್ಯಗಳಿಲ್ಲದೇ ಇರುವ ಆಂಧ್ರ ಪ್ರದೇಶದ ಗಡಿಭಾಗದಲ್ಲಿರುವ ಹಳ್ಳಿಯಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ.
ಆದರೆ ಈಗಿನ ಸರಕಾರಿ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಕ್ಷ ಶಾಲೆಯಲ್ಲಿ ಓದಿಸುತ್ತಾರೆ. ತಾವು ತಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲೇ ವಿದ್ಯಾಭಾಸ ಮಾಡಿಸಬೇಕು. ನನ್ನ ಮೂರು ಜನ ಮಕ್ಕಳನ್ನು ನಾನು ಕನ್ನಡ ಶಾಲೆಗಳಲ್ಲೇ ಓದಿಸಿದ್ದೇನೆ. ಡಾಕ್ಟರ್, ಎಂಜಿನಿಯರ್ ಆಗಿದ್ದಾರೆ. ಎಲ್ಲ ಭಾಷೆಗಳಲ್ಲೂ ಅವರು ಮಾತನಾಡುತ್ತಾರೆ.ಜಗಳೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಾಹಿತಿ ಕುಂ.ವೀರಭದ್ರಪ್ಪ ಮತ್ತು ಶಾಸಕ ದೇವೇಂದ್ರಪ್ಪ ಉದ್ಘಾಟಿಸಿದರು.
ಅಷ್ಟೇ ಅಲ್ಲ ನನ್ನನ್ನು ನನ್ನ ಹೆಂಡಿಯನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಆಂಗ್ಲ ಮಾಧ್ಯಮ, ವಿದೇಶಗಳಲ್ಲಿ ತಮ್ಮ ಮಕ್ಕಳನ್ನು ಓದಿಸಿದ ಪೋಷಕರು ಅತಂತ್ರರಾಗಿದ್ದಾರೆ. ಶಿಕ್ಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲೇ ಓದಿಸಿ ಎಂದು ಕರೆ ನೀಡಿದರು.
ನಾನೂ ಅನೇಕ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿದ್ದೇನೆ. ಆದರೆ ಶಾಸಕ ಬಿ.ದೇವೇಂದ್ರಪ್ಪ ಅವರು ಇಷ್ಟೋಂದು ದೊಡ್ಡ ಮಟ್ಟದಲ್ಲಿ ಶಿಕ್ಷಕರ ದಿನಾಚರಣೆ ಮಾಡಿರುವುದನ್ನು ನೋಡಿದರೆ ಅತ್ಯಂತ ಸಂತೋಷವಾಗುತ್ತದೆ.
ಒಬ್ಬ ಜವಾನ ಶಾಸಕನಾಗುತ್ತಾನೆ ಎಂದರೆ ಅದಕ್ಕೆ ಕಾರಣ ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರೇ ಕಾರಣ. ಸರ್ವಪಲ್ಲಿ ರಾಧಾಕೃಷ್ಣನ್, ಸಾವಿತ್ರಿ ಭಾಯಿಪುಲೆ ಅವರು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಮರೆಯಲು ಸಾಧ್ಯವೇ ಇಲ್ಲ. ನನಗೆ ಮರು ಜನ್ಮವಿದ್ದರೆ ಮತ್ತೆ ಪ್ರಾಥಮಿಕ ಶಾಲಾ ಶಿಕ್ಷಕನಾಗಿಯೇ ಕಾರ್ಯನಿರ್ವಹಿಸಲು ಬೇಡುತ್ತೇನೆ ಎಂದರು.
ಮೊನ್ನೆಯಷ್ಟೇ ಬೆಳಗಾವಿ ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿ ಪೊಲೀಸರು ಶವಸಂಸ್ಕಾರ ಮಾಡಿದ್ದನ್ನು ಪತ್ರಿಕೆಗಳಲ್ಲಿ ಓದಿದೆ. ವಿದೇಶದಲ್ಲಿ ನೆಲೆಸಿರುವ ಮಕ್ಕಳಗೆ ಮಾನವೀಯತೆ ಕೊರತೆ ಇರುತ್ತದೆ ಎಂಬುದಕ್ಕೆ ಆ ಘಟನೆಯೇ ಸಾಕ್ಷಿ.
ನನಗೆ ಬಂದ ಬಹುಮಾನದ ಹಣವನ್ನು ಸರಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟಿದ್ದೇನೆ.
ಶಾಸಕರಾದವರು ಹಣ ಮಾಡುವುದು ಹೇಗೆ ಎಂದು ವಿಧಾನಸೌಧದಲ್ಲಿ ಕುಳಿತು ಯೋಚಿಸುತ್ತಾರೆ. ಆದರೆ ಶಾಸಕ ದೇವೇಂದ್ರಪ್ಪ ಅವರು ಕ್ಷೇತ್ರದ ಅಭಿವೃದ್ಧಿ ಮತ್ತು ಶಿಕ್ಷಣ ಕ್ಷೇತ್ರದ ಅಭ್ಯುದಯಕ್ಕೆ ಐದು ವರ್ಷಗಳ ಸೇವೆ ಸಲ್ಲಿಸುತ್ತೇನೆ ಎಂದು ಪಣ ತೊಟ್ಟಿರುವುದು ಅವರ ವ್ಯಕ್ತಿತ್ವ ತೋರಿಸುತ್ತದೆ ಎಂದು ಪ್ರಶಂಸಿಸಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ನಾನು ಶಾಸಕನಾಗಿ ಇಂದಿಗೆ 103 ದಿನಗಳಾಗಿವೆ. ಜನರಿಂದ ಆಯ್ಕೆಯಾದ ನನ್ನನ್ನು ಕೆಲವರು ಒಬ್ಬ ಹುಚ್ಚ ಬಂದಿದ್ದಾನೆ ಎಂದು ನನ್ನ ತೇಜೊವಧೆ ಮಾಡಿ ವ್ಯಕ್ತಿತ್ವ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಶಿಕ್ಷಕರ ಪಾದಗಳಿಗೆ ಚಪ್ಪಲಿಯಾಗಿ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ.
ನಾನು ಶಾಸಕನಲ್ಲ ಜನಸೇವಕ ಎಂಬುದನ್ನು ಮರೆಯಬೇಡಿ. ಐವತ್ತು ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದೆ. ಈ ಮಟ್ಟಕ್ಕೆ ಬೆಳೆಯಲು ಕಾರಣ ನನ್ನ ಗುರುಗಳು ಎಂದು ಸ್ಮರಿಸಿದರು.
ನನ್ನ ಐದು ವರ್ಷಗಳ ಅವದಿಯಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತೇನೆ. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದಾದರೂ ಫಲ ಕೊಟ್ಟೆ ಕೊಡುತ್ತದೆ ಎಂದು ದೇವನೂರು ಮಹಾದೇವ ಹೇಳಿದ್ದಾರೆ. ಶಿಕ್ಷಕರಿಗೆ ಏನೇ ಸಮಸ್ಯೆಗಳಿದ್ದರೂ ನನ್ನ ಜತೆ ಮುಕ್ತವಾಗಿ ಚರ್ಚಿಸಿ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ತಹಶೀಲ್ದಾರ್ ಅರುಣ್ ಕಾರಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ರಾಘವೇಂದ್ರರಾವ್, ನೌಕರರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಪ್ಪ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ಈ.ಹಾಲಮೂರ್ತಿ,
ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ಬಿ.ಎನ್.ಸುರೇಶ್‍ರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತೇಶ್, ಕಾರ್ಯದರ್ಶಿ ಆಂಜನೇಯ ನಾಯ್ಕ್ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.