ಸುದ್ದಿವಿಜಯ, ಜಗಳೂರು: ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಕೊಡುವ 2023-24ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ತಾಲೂಕಿನ ನಾಲ್ಕು ಶಿಕ್ಷಕರು ಆಯ್ಕೆಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ 18 ಜನ ಶಿಕ್ಷಕರಲ್ಲಿ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದ ವಿಜ್ಞಾನ ಶಿಕ್ಷಕ ಬಿ.ಕೆ.ಸತೀಶ್ ಅವರು ಸರಕಾರಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದರಿಂದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸರಕಾರಿ ಶಾಲೆಯಲ್ಲಿ ಅನುದಾನದ ಕೊರತೆಯಿಂದ ಮೂಲ ಸೌಕರ್ಯಗಳಿಲ್ಲದೇ ಬಳಲಿದ್ದ ಬಸವನಕೋಟೆ ಸರಕಾರಿ ಶಾಲೆ ಸೇರಿದಂತೆ ಐದು ಶಾಲೆಗಳನ್ನು ಕಾರ್ಪೊರೇಟ್ ಕಂಪನಿಗಳ ಸಹಾಯಗಳಿಂದ ಲಕ್ಷಾಂತರ ರೂ ಅನುದಾನ ತಂದು ಶಾಲೆಯನ್ನು ಸುಸಜ್ಜಿತವಾಗಿ ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಿದ್ದರ ಫಲವಾಗಿ ಸರಕಾರ ಸತೀಶ್ ಅವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಅನೇಕ ವರ್ಷಗಳಿಂದ ಸುಣ್ಣಬಣ್ಣ ಕಾಣದ ಬಸವನಕೋಟೆ, ಉದ್ದಬೋರನಹಳ್ಳಿ, ಜಾಡನಕಟ್ಟೆ, ಉಜ್ಜಪ್ಪನಒಡೆಯರಹಳ್ಳಿ ಮತ್ತು ಅಗಸನಹಳ್ಳಿ ಗ್ರಾಮದ ಸರಕಾರಿ ಶಾಲೆಗಳನ್ನು ವಿವಿಧ ಕಾರ್ಪೊರೇಟ್ ಕಂಪನಿಗಳ ಸಹಾಯದಿಂದ ಹೈಟೆಕ್ ಶಾಲೆಗಳನ್ನಾಗಿಸಲು ಸಂಘಟನಾತ್ಮಕವಾಗಿ ಶ್ರಮಿಸಿದ ಅವರ ಸಾಧನೆ ಸಣ್ಣದಲ್ಲ.
ಮಕ್ಕಳಿಗೆ ಬೇಕಾಗುವ ನೋಟ್‍ಪುಸ್ತಕ, ವಿಜ್ಞಾನ ಉಪಕರಣಗಳು, ಸುಸಜ್ಜಿತ ಗ್ರಂಥಾಲಯ, ಲ್ಯಾಬ್, ಶುದ್ಧ ಕುಡಿಯುವ ನೀರಿನ ಘಟಕ, ಕೊಠಡಿಗಳ ನವೀಕರಣಗಳನ್ನು ಮಾಡಿಸುವ ಮೂಲಕ ಶೈಕ್ಷಣೀಕ ಕ್ರಾಂತಿ ಮಾಡದ್ದರ ಫಲವಾಗಿ ಅವರನ್ನು ಪ್ರಶಸ್ತಿ ಹುಡುಕಿಕೊಂಡು ಬಂದಿದೆ.ಇನ್ನು ತಾಲೂಕಿನ ಭರಮಸಮುದ್ರ ಗ್ರಾಮದ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಕೆ.ಜೆ.ಶ್ರೀದೇವಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿರುವುದು ಪ್ರತಿಭೆಗೆ ಸಂದ ಪ್ರತಿಫಲವಾಗಿದೆ. 2002 ರಿಂದ ವೃತ್ತಿ ಜೀವನ ಪ್ರಾರಂಭಿಸಿದ ಇವರು ಸ.ಹಿ.ಪ್ರಾ.ಶಾಲೆ ಚಿಕ್ಕ ಉಜ್ಜಿನಿ ಗ್ರಾಮದಲ್ಲಿ ಮೂರೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
17 ವರ್ಷಗಳಿಂದ ಮಕ್ಕಳಿಗೆ ಬೇಕಾಗುವ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ನೀಡುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಕ್ಲಸ್ಟರ್ ಹಂತದ ಸಂಪನ್ಮೂಲ ವ್ಯಕ್ತಿಯಾಗಿ ಗುರುತರ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಎಲೆಮರೆ ಕಾಯಿಯಂತಿರುವ ಇವರು ಮಕ್ಕಳು ಕಲಿಕಾ ಪ್ರಗತಿಯ ಮೌಲ್ಯಮಾಪನಕ್ಕಾಗಿಯೇ ಯೂಟೂಬ್ ಆರಂಭಿಸಿದ್ದು ಆ ಮೂಲಕ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ.
ತಾಲೂಕಿನ ಚಿಕ್ಕಮ್ಮನಹಳ್ಳಿ ಶಾಲೆಯ ಡಿ.ಪ್ರೇಮಾ, ದೇವಿಕೆರೆ ಶಾಲೆಯ ಎಚ್.ಎಸ್.ಸಿದ್ದಪ್ಪ ಅವರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು ಸೆ.5 ರಂದು ಮಂಗಳವಾರ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಶಾಸಕ ಬಿ.ದೇವೇಂದ್ರಪ್ಪ, ಗ್ರಾಮಸ್ಥರು, ಮಕ್ಕಳು, ಶಿಕ್ಷಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಅಭಿನಂದಿಸಿದ್ದಾರೆ.