ಸುದ್ದಿವಿಜಯ, ಜಗಳೂರು: ತಾಲೂಕಿನ ಉರುಲಕಟ್ಟೆ ಗ್ರಾಮದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಜಯಮ್ಮ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಬಂದಾಗ ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರ ಜೊತೆ ಗಲಾಟೆ ಮಾಡುತ್ತಾರೆ. ಮಕ್ಕಳಿಗೆ ಬುದ್ಧಿ ಹೇಳಬೇಕಾದ ಶಿಕ್ಷಕರೇ ಸಂಕುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು, ವಿದ್ಯಾರ್ಥಿಗಳು ಶುಕ್ರವಾರ ಶಾಲಾ ಗೇಟ್‍ಗೆ ಬೀಗ ಹಾಕಿ ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಶಾಲೆ ಸಮಯ ಬೆಳಿಗ್ಗೆ 10 ಗಂಟೆಗೆ ಶಿಕ್ಷಕರು ಬರಬೇಕು. ಆದರೆ ಮುಖ್ಯ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ವಿದ್ಯಾರ್ಥಿಗಳಿಗೆ ಪಾಠ ಬೋಧಿಸುತ್ತಿಲ್ಲ. ಮುಖ್ಯ ಶಿಕ್ಷಕಿ ಮತ್ತು ಸಹ ಶಿಕ್ಷಕಿ ಮಧ್ಯೆ ನಿತ್ಯ ಸಂಘರ್ಷ ನಡೆಯುತ್ತದೆ.
ಇಬ್ಬರ ಮಧ್ಯದ ಜಗಳದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಪಾಠ ಮಾಡುವುದಿಲ್ಲ. ಸಣ್ಣ ಸಣ್ಣ ವಿಷಯಕ್ಕೂ ಜಗಳವಾಡುತ್ತಾರೆ. ಇಂತಹ ಶಿಕ್ಷಕರು ಒಟ್ಟಿಗೆ ಇದ್ದರೆ ಮಕ್ಕಳಿಗೆ ಅನ್ಯಾಯವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ.ಮಕ್ಕಳಿಗೆ ಪಾಠ ಬೋಧಿಸುವ ಶಿಕ್ಷಕರೇ ಮಕ್ಕಳ ಮುಂದೆ ಸಣ್ಣ ಸಣ್ಣ ವಿಷಯಕ್ಕೆ ಜಗಳವಾಡುತ್ತಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇಬ್ಬರನ್ನೂ ವರ್ಗಾವಣೆ ಮಾಡಿ. ಇವರ ಸಹವಾಸವೇ ಬೇಡ. ಬೇರೆ ಶಿಕ್ಷಕರನ್ನು ನೇಮಿಸಿ ಎಂದು ಪ್ರತಿಭಟನೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.
ಪ್ರತಿಭಟನೆ ನಡೆಯುತ್ತಿದ್ದ ಉರುಲಕಟ್ಟೆ ಗ್ರಾಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಈ.ಹಾಲಮೂರ್ತಿ ಭೇಟಿ ನೀಡಿ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರ ಜೊತೆಗೆ ಸಭೆ ನಡೆಸಿದರು. ಶಿಕ್ಷರು ಮಕ್ಕಳ ಮುಂದೆ ಹೀಗೆ ಜಗಳವಾಡಿದರೆ ಮಕ್ಕಳು ಹಾಗೆ ಮಾಡುತ್ತಾರೆ.
ಶಿಕ್ಷಕರು ತಾಳ್ಮೆಯಿಂದ ವರ್ತಿಸಬೇಕು. ಸಮಯಕ್ಕೆ ಸರಿಯಾಗಿ ಶಾಲೆಗೆ ಬನ್ನಿ. ಮಕ್ಕಳಿಗೆ ಪಾಠ ಮಾಡಿ ಎಂದು ಬುದ್ಧಿ ಹೇಳಿ ಸಮಸ್ಯೆಗೆ ಬಗೆಹರಿಸಿದ ನಂತರ ಗ್ರಾಮಸ್ಥರು, ಮಕ್ಕಳು ಪ್ರತಿಭಟನೆ ವಾಪಾಸ್ ಪಡೆದರು.