ಸುದ್ದಿವಿಜಯ, ಜಗಳೂರು: ಪಟ್ಟಣದ ಶತಮಾನದ ಹೊಸ್ತಿಲಲ್ಲಿರುವ ಸರಕಾರಿ ಉರ್ದು ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಶಾಲೆಯನ್ನು ಸೋಮವಾರದಿಂದ ಮಟ್ಟಣದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರಕಾರಿ ಮೌಲಾನಾ ಅಜಾದ್ ಮಾದಿರ ಶಾಲೆಯ ಕಟ್ಟಡಕ್ಕೆ ಶಿಫ್ಟ್ ಮಾಡಲು ಇಲಾಖೆಯಿಂದ ಅಧಿಕೃತವಾಗಿ ಪತ್ರ ನೀಡಲಾಗಿದೆ ಎಂದು ಪ್ರಭಾರ ಬಿಇಒ ಸುರೇಶ್ ರೆಡ್ಡಿ ವಿಕಗೆ ತಿಳಿಸಿದರು.
ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಬಿಇಒ ಸುರೇಶ್‍ರೆಡ್ಡಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಿ.ಡಿ.ಹಾಲಪ್ಪ, ಶಾಸಕರ ಪುತ್ರ ಎಂ.ಡಿ.ಕೀರ್ತಿಕುಮಾರ್ ಸೇರಿದಂತೆ ಅನೇಕ ಅಧಿಕಾರಿಗಳು ಜಾಮಿಯಾ ಮಸೀದಿ ಬಳಿ ಇರುವ ಸರಕಾರಿ ಉರ್ದು ಶಾಲೆಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶತಮಾನದ ಹೊಸ್ತಿಲಲ್ಲಿರುವ ಉರ್ದು ಶಾಲೆ ಸಂಪೂರ್ಣ ಸೋರುತ್ತಿದೆ. ಕಳೆದ ವರ್ಷ ತಾಲೂಕಿನ ಸರಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ‘ಶಿಥಿಲಾವಸ್ಥೆಯ ಶತಮಾನದ ಶಾಲೆಗಳಿಗಿಲ್ಲ ಕಾಯಕಲ್ಪ’ ಎಂಬ ಶೀರ್ಷಿಕೆ ಅಡಿ ಸುದ್ದಿವಿಜಯ ಸುದ್ದಿ ಪ್ರಕಟವಾಗಿತ್ತು.
ಮಳೆಗಾಲವಾಗಿರುವ ಕಾರಣ ಶಾಲೆಯಲ್ಲಿ ಓದುತ್ತಿರುವ 80 ಮಕ್ಕಳನ್ನು ಮೌಲಾನಾ ಅಜಾದ್ ಮಾದರಿ ಶಾಲೆಯ ಎರಡು ಮಹಡಿಯಲ್ಲಿ ಮೊದಲನೆ ಮಹಡಿಯನ್ನು ತಾತ್ಕಾಲಿಕವಾಗಿ ಬಿಟ್ಟುಕೊಡುವ ಬಗ್ಗೆ ಜಿಲ್ಲಾಧಿಕಾರಿಗಳು, ಶಾಸಕರು, ತಹಶೀಲ್ದಾರ್, ಮೌಲಾನಾ ಶಾಲೆಯ ಡಿಒ ಅವರಿಗೆ ಪತ್ರ ಬರೆಯಲಾಗಿದೆ.
ಶಾಲೆಯ ಕೊಠಡಿಗಳು ಸಮಪೂರ್ಣವಾಗಿ ಶಿಥಿಲವಾಗಿದ್ದು ಬೀಳುವ ಹಂತದಲ್ಲಿರುವ ಕಾರಣ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಸುರೇಶ್‍ರೆಡ್ಡಿ ತಿಳಿಸಿದ್ದಾರೆ.
ಮಕ್ಕಳ ಹಿತ ದೃಷ್ಟಿಯಿಂದ ಹೊಸ ಕಟ್ಟಡ ನಿರ್ಮಾಣವಾಗುವವರೆಗೂ ಸ್ಥಳ ಬದಲಾವಣೆ ಮಾಡುವಂತೆ ಶಾಲೆಯ ಶಿಕ್ಷಕರಿಗೆ ಸೂಚನೆ ನೀಡಿದ್ದೇವೆ. ಆದಷ್ಟು ಬೇಗ ಸೂಕ್ತ ಜಾಗ ಗುರುತಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ, ಶಾಸಕರಿಗೆ ಪತ್ರಬರೆದಿದ್ದೇವೆ ಎಂದರು.