ಸುದ್ದಿವಿಜಯ, ಜಗಳೂರು: ಇನ್‍ಸೈಟ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ.ವಿನಯ್‍ಕುಮಾರ್ ಅವರ ‘ವಿನಯ ನಡಿಗೆ ಹಳ್ಳಿ ಕಡೆಗೆ’ ಪಾದಯಾತ್ರೆಗೆ ಅಭೂತ ಪೂರ್ವ ಜನ ಬೆಂಬಲ ವ್ಯಕ್ತವಾಗುತ್ತಿದೆ.
ಸೋಮವಾರ ತಾಲೂಕಿನ ಚಿಕ್ಕ ಉಜ್ಜಿನಿ ಗ್ರಾಮದಿಂದ ಆರಂಭವಾದ ಪಾದಯಾತ್ರೆ ಮೊದಲನೆ ದಿನ ಗಡಿಮಾಕುಂಟೆ, ಲಕ್ಕಂಪುರ ಕ್ಯಾಸೇನಹಳ್ಳಿ, ಗೌಡಗೊಂಡನಹಳ್ಳಿ ತಮಲೇಹಳ್ಳಿ ವರೆಗೆ ಸುಮಾರು 25 ಕಿ.ಮೀ ಸಾಗಿತು. ರಾತ್ರಿ ತಮಲೇಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು.
ರಾತ್ರಿ ಅನೇಕ ಮುಖಂಡರು ವಿನಯ್‍ಕುಮಾರ್ ಅವರ ಪಾದಯಾತ್ರೆಗೆ ಸಾಕಷ್ಟು ಬೆಂಬಲ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ಟಿಕೆಟ್ ತನ್ನಿ ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಅಭಯ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ನನ್ನನ್ನು ಬೆಂಬಲಿಸಿದರೆ ಶಿಕ್ಷಣ, ಮೂಲಸೌಕರ್ಯ, ಮಹಿಳಾ ಸಬಲೀಕರಣ, ರೈತ ಪರವಾದ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಇಡೀ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಭರವಸೆ ನೀಡಿದರು.
ಮಂಗಳವಾರ ಬೆಳಗ್ಗೆ ಪುನಃ ಆರಂಭವಾದ ಪಾದಯಾತ್ರೆ ಹನುಮಂತಾಪುರ ಗೊಲ್ಲರಹಟ್ಟಿ, ಹನುಮಂತಾಪುರ, ಕಸವನಹಳ್ಳಿ, ಗೋಗುದ್ದು, ಉದ್ದಗಟ್ಟ, ಜಗಳೂರು ಗೊಲ್ಲರಹಟ್ಟಿ, ಮರೇನಹಳ್ಳಿ ಜಮ್ಮಾಪುರ, ಜಮ್ಮಾಪುರ ಗೊಲ್ಲರಹಟ್ಟಿಯವರೆಗೂ ಸಾಗಿತು.
ಇದೇ ವೇಳೆ ಉದ್ದಗಟ್ಟದ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವಿನಯ್ ಕುಮಾರ್, ಶಿಕ್ಷಣೀಕವಾಗಿ ಸಾಧನೆ ಮಾಡಿ ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ನಿಮ್ಮ ಗುರಿ, ಸಾಧನೆಯನ್ನು ಬಿಡದೆ ಮುನ್ನುಗ್ಗಿ. ನಾನು ನಿಮ್ಮ ಯಶಸ್ಸಿಗೆ ಮೆಟ್ಟಿಲಾಗಿರುತ್ತೇನೆ ಎಂದು ವಿದ್ಯಾರ್ಥಿನಿಯರಿಗೆ ಅಭಯ ನೀಡಿದರು.
ರೈತರು, ಕೂಲಿಕಾರ್ಮಿಕರು, ಗ್ರಾಮೀಣ ಭಾಗದ ಜನಸಾಮಾನ್ಯರ ಜೊತೆ ಮಾತುಕತೆ ನಡೆಸುತ್ತಾ ಸಮಸ್ಯೆ ಕೇಳುತ್ತಾ ಜಿ.ಬಿ.ವಿಜಯ್‍ಕುಮಾರ್ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.