ಸುದ್ದಿವಿಜಯ, ಜಗಳೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ಅಮಾಯಕ ವೃದ್ದ ಬಲಿಯಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದ್ದು ಸಾವು ಖಂಡಿಸಿ ಸಂಬಂಧಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮ್ಮನಹಟ್ಟಿ ಗ್ರಾಮದ ಕರಿಯಪ್ಪ (60) ಮೃತ ವೃದ್ದ. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಸರಿಯಾಗಿ ಸ್ಪಂದನೆ ನೀಡಿಲ್ಲ. ಸ್ವಲ್ಪ ಹೊತ್ತಿನ ನಂತರ ವೈದ್ಯರು ಬಂದು ಎರಡು ಇಂಜೆಕ್ಷನ್ ಮಾಡಿಸಿದ್ದಾರೆ. ಆದರೆ ಮತ್ತಷ್ಟು ವೃದ್ಧ ಸುಸ್ತಾಗಿದ್ದಾರೆ.
ರಕ್ತ ಪರೀಕ್ಷೆ ಮಾಡಿಸುವಂತೆ ತಿಳಿಸಿದ್ದಾರೆ. ವೃದ್ದನ ಪರಿಸ್ಥಿತಿ ನೋಡಿದ ನರ್ಸ್ ದಾವಣಗೆರೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದ ವೃದ್ದ ಮೃತಪಟ್ಟ ಹಿನ್ನೆಲೆ ವೈದ್ಯಾಧಿಕಾರಿಯನ್ನು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮೃತ ವೃದ್ದನ ಮಕ್ಕಳು, ಸಂಬಂಧಿಗಳು, ಗ್ರಾಮಸ್ಥರು ಸಾರ್ವಜನಿಕ ಆಸ್ಪತ್ರೆಯ ಮುಂದೆ ಜಮಾಯಿಸಿ ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ವೈದ್ಯಾಧಿಕಾರಿ ಡಾ.ಷಣ್ಮುಖ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ವೈದ್ಯರನ್ನು ದೇವರೆಂದು ಕರೆಯುತ್ತಾರೆ.
ಆದರೆ ನಿಮ್ಮ ನಿರ್ಲಕ್ಷದಿಂದ ಅಮಯಾಕ ಜೀವ ಬಲಿಯಾಗಿದೆ. ವೈದ್ಯರಿಗೆ ರೋಗಿಗಳ ಬಗ್ಗೆ ಕಾಳಜಿ ಇಲ್ಲ. ನರ್ಸ್ಗಳು ಕೂಡ ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸಿದರೆ ಆಸ್ಪತ್ರೆಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತೋರಣಗಟ್ಟೆ ಬಾಲಪ್ಪ, ಪಿಡಿಒ ವಾಸು, ಹೋರಾಟಗಾರ ಮಹಾಲಿಂಗಪ್ಪ ಸಿ.ಎಂ ಹೊಳೆ, ಚಿಕ್ಕಮ್ಮನಹಟ್ಟಿ ಕಾಟಪ್ಪ ಸೇರಿದಂತೆ ಮತ್ತಿತರರಿದ್ದರು.