ಸುದ್ದಿ ವಿಜಯ, ಜಗಳೂರು: ಕರ್ನಾಟಕ ಸರಕಾರದಿಂದ 2021 ರ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರತಿಭೆ ಹಾಗೂ ಸಮಾಜ ಸೇವಕಿ ಸೂಲಗಿತ್ತಿ ಸುಲ್ತಾನ್ ಬೀ ನಿಧನರಾಗಿದ್ದಾರೆ.
ಸುಲ್ತಾನ್ ಬೀ ಅವರು ಜಗಳೂರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬಡವರಿಗೆ ವೈದ್ಯಕೀಯ ನೆರವು ನೀಡುವುದರ ಮೂಲಕ ಮನೆ ಮಾತಾಗಿದ್ದರು. ಹಳ್ಳಿಗಳಲ್ಲಿ ಸಾವಿರಾರು ಹೆರಿಗೆ ಮಾಡಿಸಿ ಬಡ ಜನರ ಪಾಲಿಗೆ ದೇವತಾ ಸ್ವರೂಪಿಯಾಗಿದ್ದರು.
ಇಸುಬು, ಹುಳಕಡ್ಡಿ ಹಾಗೂ ಅನೇಕ ರೀತಿಯ ಚರ್ಮ ರೋಗಗಳಿಗೆ ತಾವೇ ತಯಾರಿಸಿದ ನಾಟಿ ಔಷಧಿಗಳ ಮೂಲಕ ಚಿಕಿತ್ಸೆಯನ್ನೂ ನೀಡುತ್ತಿದ್ದರು. ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರುವ ಹವ್ಯಾಸವೂ ಅವರಿಗಿತ್ತು. 2019ರಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಗಿನ ಅಧ್ಯಕ್ಷರಾಗಿದ್ದ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿಯವರ ಅಧ್ಯಕ್ಷತೆಯ ಅವಧಿಯಲ್ಲಿ ಸುಲ್ತಾನ್ ಬೀ ಅವರ ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ ಗ್ರಾಮೀಣ ಸಿರಿ ಪ್ರಶಸ್ತಿಯೊಂದಿಗೆ ಗೌರವಿಸಿತ್ತು.
ಇಂತಹ ಪ್ರಚಾರ, ಪ್ರಶಸ್ತಿ, ಹಣ ಬಯಸದೇ ಅವುಗಳಿಂದ ದೂರವಿದ್ದು ಸಮಾಜಮುಖಿ ಸೇವೆ ಸಲ್ಲಿಸಿದ್ದ ಸಮಾಜ ಸೇವಕಿ ಸುಲ್ತಾನ್ ಬೀ ಅವರ ಅಗಲುವಿಕೆ ಸಂಬಂಧಿಕರು, ಬಂಧುಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.