ಸುದ್ದಿವಿಜಯ,ಬಾಗಲಕೋಟೆ: ಇಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ 75ನೇ ಹುಟ್ಟಹಬ್ಬಕ್ಕೆ ಬಾಗಲಕೋಟೆಯಿಂದ ಬರುತ್ತಿದ್ದ ಕ್ರೂಸರ್ ಅಪಘಾತದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ಬಾದಾಮಿ ತಾಲೂಕಿನ ಹೂಲಗೇರಿ ಕ್ರಾಸ್ ಬಳಿ ಮಂಗಳವಾರ ಸಂಜೆ ಅಪಘಾತ ನಡೆದಿದೆ. ಮುಧೋಳ ತಾಲೂಕಿನ ಚಿಕ್ಕ ಆಲಗುಂಡಿಯ ಪ್ರಕಾಶ ಬಡಿಗೇರ (34) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವೇಗವಾಗಿ ಹೊರಟಿದ್ದ ಕ್ರೂಸರ್ ಎದುರಿಗೆ ಬಂದ ಗೂಡ್ಸ್ ವಾಹನಕ್ಕೆ ಮುಖಾಮುಖಿಯಾಗಿದೆ. ಅಪಘಾತದ ರಭಸಕ್ಕೆ ಕ್ರೂಸರ್ ತಿರುಗಿ ನಿಂತಿದೆ.
ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. 6 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕ್ರೂಸರ್ನಲ್ಲಿ ಒಟ್ಟು 12 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಇವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿರುವ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಎಸ್ ಪಿ ಜಯಪ್ರಕಾಶ್, ಡಿಎಸ್ ಪಿ ಪ್ರಶಾಂತ ಮುನ್ನೋಳಿ ಭೇಟಿ ನೀಡಿದ್ದಾರೆ.
ಮುಧೋಳ ತಾಲೂಕಿನ ಹಿರೇ ಆಲಗುಂಡಿಯಿಂದ ಮಂಗಳವಾರ ಸಂಜೆ 14 ಕಾಂಗ್ರೆಸ್ ಕಾರ್ಯಕರ್ತರು ದಾವಣಗೆರೆಗೆ ಹೊರಟಿದ್ದರು. ಹಾವೇರಿ ಜಿಲ್ಲೆಯ ಕಾಗಿನೆಲೆಗೆ ಭೇಟಿ ನೀಡಿ ನಂತರ ದಾವಣಗೆರೆಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ಮುಧೋಳದಿಂದ 40 ಕಿ.ಮೀ. ದೂರದ ಹೂಲಗೇರಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡಿರುವ ಆನಂದ ಮುತ್ತಪ್ಪನವರ, ಮಂಜುನಾಥ ಚಿಚಖಂಡಿಯವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಾವೆಲ್ಲ ಸಿದ್ದರಾಮಯ್ಯ ಅವರ ಅಭಿಮಾನಿಗಳು. ಹಿರೇ ಆಲಗುಂಡಿಯಿಂದ ಸಂಜೆ ಕ್ರೂಸರ್ ಮಾಡಿಕೊಂಡು ದಾವಣಗೆರೆಗೆ ಹೊರಟಿದ್ದೆವು. ಹೂಲಗೇರಿ ಕ್ರಾಸ್ ಬಳಿ ಗಾಡಿ ಪಲ್ಟಿಯಾದ ಹಾಗಾಯಿತು. ಏನಾಯಿತು ಗೊತ್ತಾಗಲಿಲ್ಲ .
ಮಂಜುನಾಥ್, ಗಾಯಾಳು