ಸುದ್ದಿವಿಜಯ: ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬ ಜೋರಾಗಿದೆ. ನಗರದ ಹೊರವಲಯದ ಕುಂದವಾಡದಲ್ಲಿರುವ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಬುಧವಾರ ಆರಂಭವಾಗಿದೆ.
ಅಮೃತ ಮಹೋತ್ಸವದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಕಾಂಗ್ರೆಸ್ ನಾಯಕರು, ಸಿದ್ದರಾಮಯ್ಯ ಅಭಿಮಾನಿಗಳು ಆಗಮಿಸಿದ್ದು ಎಸ್. ಎಸ್. ಪ್ಯಾಲೇಸ್ ಮೈದಾನದ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿ ಜನರು ಸಮಸ್ಯೆ ಎದುರಿಸುವಂತಾಯಿತು.
ಕಾರ್ಯಕ್ರಮದ ಕೇಂದ್ರಬಿಂದು ಸಿದ್ದರಾಮಯ್ಯ ಅವರು ವೇದಿಕೆಗೆ ಬಂದಾಗ ಉಂಟಾದ ನೂಕುನುಗ್ಗಲಿನಿಂದಾಗಿ ಮಾಜಿ ಸಚಿವ ಎಚ್. ಆಂಜನೇಯ ವೇದಿಕೆಯ ಮೇಲೆ ಎಡವಿ ಬಿದ್ದರು. ಕೂಡಲೇ ವೇದಿಕೆಯಲ್ಲಿ ಇದ್ದವರು ಕೈ ಹಿಡಿದು ಮೇಲಕ್ಕೆತ್ತಿದರು. ಸಾವರಿಸಿಕೊಂಡ ಆಂಜನೇಯ ಅವರು ಸಿದ್ದರಾಮಯ್ಯ ಅವರ ಕೈಕುಲುಕಿ ಸ್ವಾಗತಿಸಿದರು.
ಹಾವೇರಿ, ಬೆಳಗಾವಿ, ಶಿವಮೊಗ್ಗ, ಬದಾಮಿ, ಕೊಪ್ಪಳ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ವಿಜಯನಗರ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಜನರು ಆಗಮಿಸಿದ್ದಾರೆ. ಸುರಿಯುವ ಮಳೆಯನ್ನು ಲೆಕ್ಕಿಸದೆ ಸಿದ್ದರಾಮಯ್ಯನವರಿಗೆ ಜಯವಾಗಲಿ. ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಕೂಗುವ ದೃಶ್ಯ ಎಲ್ಲೆಡೆ ಕಂಡು ಬಂತು.
ಸಿದ್ದರಾಮಯ್ಯ ವೇದಿಕೆ ಮೇಲೆ ಬರುತ್ತಿದ್ದಂತೆ ನೆರೆದಿದ್ದ ಜನರುಕೇಕೆ ಚಪ್ಪಾಳೆ ಶಿಳ್ಳೆಗಳು ಮೊಳಗಿದವು. ತಮ್ಮ ನೆಚ್ಚಿನ ನಾಯಕನಿಗೆ ಜಯಘೋಷ ಕೂಗಿದರು.
ಸಾಧು ಕೋಕಿಲ ಮತ್ತು ಬಳಗ ವೇದಿಕೆಯಲ್ಲಿ ಹಾಡುತ್ತಿದ್ದರೆ ಜನ ಹುಚ್ಚೆದ್ದು ಕೇಕೆ ಹಾಕಿದರು. ಕುಣಿಯಲು ಜಾಗ ಇಲ್ಲದ ಕಾರಣ ಇದ್ದಲ್ಲೇ ಮೈಕೈ ಅಲ್ಲಾಡಿಸಿದರು. ‘ಗೊಂಬೆ ಹೇಳುತೈತೆ’ ಹಾಡು ಹಾಡುವಾಗ ಎಲ್ಲರೂ ಮೊಬೈಲ್‌ನಲ್ಲಿ ಲೈಟ್ ಆನ್ ಮಾಡಿ ಬೆಳಕು ಹರಿಸಿದರು. ‘ಒಳಿತು ಮಾಡು ಮನುಜ’ ಹಾಡಿಗೆ ಜನರು ಧ್ವನಿಗೂಡಿಸಿದರು.