ಸುದ್ದಿವಿಜಯ,ಜಗಳೂರು: ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ 11ನೇ ವಾರ್ಡ್ನ ಸದಸ್ಯರಾದ ಸಿ.ವಿಶಾಲಾಕ್ಷಿ (ಎಸ್ಟಿ)ಮತ್ತು ಉಪಾಧ್ಯಕ್ಷರಾಗಿ 13ನೇ ವಾರ್ಡ್ನ ಸದಸ್ಯರಾದ ನಿರ್ಮಲಕುಮಾರಿ(ಎಸ್ಸಿ) ಉಪಾಧ್ಯಕ್ಷರಾಗಿ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಈ ಹಿಂದೆ ಅಧ್ಯಕ್ಷೆಯಾಗಿದ್ದ ಎಸ್.ಸಿದ್ದಪ್ಪ, ಉಪಾಧ್ಯಕ್ಷೆ ಬಿ. ಮಂಜಮ್ಮ ಇವರು ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು.
ಪ.ಪಂ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ತಹಸೀಲ್ದಾರ್ ಸಂತೋಷ್ ಕುಮಾರ್ ಪರಿಶೀಲನೆ ನಡೆಸಿ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ಒಟ್ಟು 18 ಮಂದಿ ಸದಸ್ಯರಿದ್ದು ಒಮ್ಮತದ ತೀರ್ಮಾನದಿಂದ ಆಯ್ಕೆ ಮಾಡಲಾಯಿತು.
ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ಅನುದಾನದ ಕೊರತೆ ಇದೆ. ಆದರೂ ಇರುವ ಹಣವನ್ನು ಬಳಸಿಕೊಂಡು ಅಭಿವೃದ್ದಿ ಪಡಿಸೋಣ.
ಮುಂದಿನ ದಿನಗಳಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಸರ್ವ ಸದಸ್ಯರು ಪಟ್ಟಣದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಳಿ ನಿಯೋಗ ಕರೆದುಕೊಂಡು ಹೋಗಲಾಗುವುದು. ಯಾವುದೇ ಪಕ್ಷ ಭೇದ ವಿಲ್ಲದೇ ಒಂದು ತಂಡವಾಗಿ ಕೆಲಸ ಮಾಡಿ ಪ್ರಗತಿ ಮಾಡಿ ಎಂದು ಸಲಹೆ ನೀಡಿದರು.
ಪಟ್ಟಣದಲ್ಲಿ ಹೊಸ ನಿವೇಶನಗಳನ್ನು ಮಾಡಿ ಬಡವರಿಗೆ ಹಂಚಿಕೆ ಮಾಡಲಾಗುವುದು. ಈಗಾಗಲೇ ಜಮೀನು ತುಂಬ ದುಬಾರಿಯಾಗಿದ್ದು ಖರೀದಿ ಮಾಡಲು ಸಾದ್ಯವಾಗುತ್ತಿಲ್ಲ. ಹಾಗಾಗಿ ಸಾದ್ಯವಾದಷ್ಟು ನಿವೇಶನ ನೀಡಲಾಗುವುದು ಎಂದರು.
ಶೀಘ್ರವೇ ಜಗಳೂರು ಕೆರೆಗೆ ನೀರು:
ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಡಿಸೆಂಬರ್ ತಿಂಗಳಿಗೆ ಜಗಳೂರು ಕೆರೆಗೆ ನೀರು ತುಂಬಿಸಲಾಗುವುದು. ಮುನ್ನೂರುಪೈಪ್ ಗಳ ಬೇಕಾಗಿದ್ದು, ಬಂದ ಕೂಡಲೇ ಕಾಮಗಾರಿ ವೇಗ ಪಡೆಯಲಿದೆ ಎಂದು ಶಾಸಕರು ತಿಳಿಸಿದರು.
ಮಾಜಿ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ಮಾತನಾಡಿ, ಇರುವ ಅವದಿಯಲ್ಲಿ ಉತ್ತಮ ಕೆಲಸ ಮಾಡಿ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು. ವಿರೋಧ ಪಕ್ಷಗಳ ಸದಸ್ಯರು ಸಹ ನಮ್ಮ ಜೊತೆ ಕೈಜೋಡಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿ.ಕೆ ರಮೇಶ್, ಬಿ.ಟಿ ರವಿ, ಷಕೀಲ್ ಅಹಮದ್, ಎನ್. ಮಹಮದ್ಅಲಿ, ಎಸ್.ಮಂಜುನಾಥ, ಎಸ್. ಸಿದ್ದಪ್ಪ, ಪಾಪಲಿಂಗಪ್ಪ, ಕೆ.ಎಸ್ ನವೀನ್ ಕುಮಾರ್, ದೇವರಾಜ್, ಲುಕ್ಮಾನ್ ವುಲ್ಲಾ ಖಾನ್, ಬಿ.ಮಂಜಮ್ಮ, ಟಿ.ಲಲೀತ, ಜಿ.ಬಿ ಲೋಲಾಕ್ಷಮ್ಮ, ಸರೋಜಮ್ಮ, ಲೋಕಮ್ಮ ಸೇರಿದಂತೆ ಮತ್ತಿತರಿದ್ದರು.