ಸುದ್ದಿ ವಿಜಯ, ಜಗಳೂರು: ಆತನೊಬ್ಬ ಅಂಗವೈಕಲ್ಯತೆ ಹೊಂದಿದವನಾಗಿದ್ದರೂ ನೆಚ್ಚಿದ ಯುವತಿಯೊಬ್ಬಳು ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಪರೂಪದ ವಿವಾಹಕ್ಕೆ ಸೋಮವಾರ ಇಡೀ ಗ್ರಾಮವೇ ಸಾಕ್ಷಿಯಾಯಿತು.
ತಾಲೂಕಿನ ಭರಮಸಮುದ್ರ ಗ್ರಾಮದ ಹುಟ್ಟು ಕುರುಡನಾದ ಯುವಕ ರಂಗಸ್ವಾಮಿ ಹಾಗೂ ಚಿಕ್ಕಬನ್ನಿಹಟ್ಟಿ ಗ್ರಾಮದ ಯುವತಿ ಕರಿಬಸಮ್ಮ ಹೊಸ ದಾಂಪತ್ಯದ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿವಾಹವನ್ನು ಇಡೀ ಗ್ರಾಮವೇ ಅರಸಿ ಆರೈಸಿದೆ.
ಗ್ರಾಮದ ಹಿರಿಯರು, ಮುಖಂಡರು ದೇಣಿಗೆ ಸಂಗ್ರಹಿಸಿ ಈ ವಿವಾಹನ್ನು ಗ್ರಾಮ ದೇವತೆ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನೆರವೇರಿಸಿದ್ದಾರೆ. ಕಳೆದ ವಾರದಿಂದ ಮದುವೆ ಸಿದ್ದತೆ ಮಾಡಿಕೊಂಡಿದ್ದರು. ಬೆಳಗ್ಗೆ ದೇವಸ್ಥಾನಲ್ಲಿ ವಿಶೇಷ ಪೂಜೆ ಸಲ್ಲಿಸಿ ಇಬ್ಬರ ವಿವಾಹವನ್ನು ಸಂಭ್ರಮದಿಂದ ಮಾಡಲಾಯಿತು. ಪ್ರತಿಯೊಬ್ಬರು ಸಿಹಿ ಊಟ ನೀಡಲಾಯಿತು.
ಮೈಸೂರು ಯುವರಾಜ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬಳಿಕ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದು ಕಂಪ್ಯೂಟರ್ ಜ್ಞಾನ ಪಡೆದಿದ್ದಾನೆ. ಬೆಂಗಳೂರು ಟಾಟಾ ಕಂಪನಿ, ರಾಣೆಬೆನ್ನೂರಿನಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿ ಇದೀಗ ಅಂಧ ಮಕ್ಕಳಿಗೆ ಆನ್‍ಲೈನ್ ತರಗತಿಗಳನ್ನು ಹೇಳಿಕೊಡುತ್ತಿದ್ದಾನೆ.
ಮದುವೆ ನಿಗದಿಯಾದ ಕೂಡಲೇ ಗ್ರಾಮದ ಮುಖಂಡರು ಮುಂದೆ ನಿಂತು ವಿವಾಹ ಮಾಡಿಕೊಡಲು ನಿರ್ಧರಿಸಿದರು. ಮದುವೆಗೆ ಬೇಕಾದಂತಹ ಸೀರೆ, ತಾಳಿ, ಬಟ್ಟೆ ಸೇರಿದಂತೆ ಪ್ರತಿಯೊಂದು ಖರ್ಚನ್ನು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು, ಶಾಸಕ ಎಸ್.ವಿ ರಾಮಚಂದ್ರ ಭರಿಸಿ ಸಹಕಾರ ನೀಡಿದ್ದಾರೆ, ಎಲ್ಲರಿಗೂ ಋಣಿಯಾಗಿದ್ದೇನೆ ಎನ್ನುತ್ತಾರೆ ರಂಗಸ್ವಾಮಿ.
“ ನನ್ನ ಕನಸ್ಸಲ್ಲೂ ಮದುವೆಯಾಗುತ್ತೇನೆ ಅಂದುಕೊಂಡಿರಲಿಲ್ಲ, ದೂರದ ಸಂಬಂಧಿ ಕರಿಬಸಮ್ಮ ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದರಿಂದ ನಾನು ಹೊಸ ಜೀವನಕ್ಕೆ ಹೆಜ್ಜೆ ಇಟ್ಟಿದ್ದೇನೆ, ಇಷ್ಟೊಂದು ಜನರ ಸಹಕಾರದಿಂದ ಮದುವೆಯಾಗುತ್ತಿರುವುದು ತುಂಬ ಸಂತಸವಾಗುತ್ತಿದೆ. ನನ್ನ ಕೈ ಹಿಡಿದ ಪತ್ನಿಗೆ ಕೃತಜ್ಞತೆ ಸಲ್ಲಿಸುತ್ತೇನೆ’