ಸುದ್ದಿವಿಜಯ, ಜಗಳೂರು: ಶಾಂತಿ ಮತ್ತು ಸತ್ಯದಿಂದ ಕಠಿಣ ಯುದ್ದಗಳನ್ನು ಗೆಲ್ಲಬಹುದು ಎಂದು ಜಗತ್ತಿಗೆ ಕಲಿಸಿದ ಮಹಾನ್ ವ್ಯಕ್ತಿ ಮಹಾತ್ಮಗಾಂಧಿ ಎಂದು ತಹಸೀಲ್ದಾರ್ ಜಿ.ಸಂತೋಷ್‍ಕುಮಾರ್ ಹೇಳಿದರು.
ಇಲ್ಲಿನ ತಾಲೂಕು ಕಚೇರಿಯಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮ ಗಾಂಧಿಯನ್ನು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಅವರು ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದರು ಮತ್ತು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖರಾದವರು. ಅವರು ಅಹಿಂಸಾ ಮಾರ್ಗಗಳ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದರು ಎಂದರು.
ಮೂವತ್ತು ವರುಷಗಳ ಸಮರ್ಪಣಾ ಸೇವೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹಿಂದಿತ್ತು. ಈ ಅವಧಿಯಲ್ಲಿ ಅವರೊಬ್ಬ ಪ್ರಮಾಣಿಕ ಮತ್ತು ಅತ್ಯಂತ ಸಾಮಥ್ರ್ಯವಿರುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.
ಶಾಸ್ತ್ರಿ ಅವರು ವಿನಮ್ರತೆ, ಸಹಿಷ್ಣುತೆ, ಮಹಾನ್ ಆಂತರಿಕ ಶಕ್ತಿಯುಳ್ಳ ಮತ್ತು ದೃಢನಿಶ್ಚಯವುಳ್ಳ, ಜನರ ಭಾಷೆಯನ್ನು ಅರ್ಥೈಸಿಕೊಂಡ ಜನರ ವ್ಯಕ್ತಿಯಾದರು. ಪ್ರಗತಿಯೆಡೆಗೆ ರಾಷ್ಟ್ರವನ್ನು ಮುನ್ನಡೆಸಿದ ದೂರದೃಷ್ಠಿಯುಳ್ಳ ವ್ಯಕ್ತಿ ಅವರಾಗಿದ್ದರು ಎಂದು ಸ್ಮರಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಮಾತನಾಡಿ, ಗಾಂಧೀಜಿ ಸರಳ ಜೀವನದ ಮೂಲಕ ಮಹಾನ್ ಸಾಧನೆಗಳನ್ನು ಮಾಡಿದ ಭಾರತದ ಮಹಾನ್ ತಪಸ್ವಿಗಳು ಮತ್ತು ಗುರುಗಳಿಂದ ಅವರು ಸ್ಫೂರ್ತಿ ಪಡೆದಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಮಂಜಾನಂದ, ಆಹಾರ ಇಲಾಖೆ ಅಧಿಕಾರಿ ಶಿವಪ್ರಕಾಶ್, ಸಿಬ್ಬಂದಿಗಳಾದ ಚಂದ್ರಪ್ಪ, ಕಾಂತರಾಜ್, ಲಂಕೇಶ್, ರಾಘವೇಂದ್ರ, ನೇತ್ರಾವತಿ ಸೇರಿದಂತೆ ಮತ್ತಿತರಿದ್ದರು.