ಸುದ್ದಿವಿಜಯ, ಬೆಂಗಳೂರು: ಪಠ್ಯೇತರ ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ನೋ ಬ್ಯಾಗ್ ಡೇ ಚರ್ಚೆಗೆ ಮೂರ್ತ ರೂಪ ದೊರೆಯುವ ಸಮಯ ಸನ್ನಿಹಿತವಾಗಿದೆ. ಇದೇ ಡಿಸೆಂಬರ್‌ನಿಂದ ಪ್ರತಿ ಶನಿವಾರ ಬ್ಯಾಗ್ ಲೆಸ್ ಡೇ ಆಗಿ ಆಚರಿಸಲು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮುಂದಾಗಿದ್ದಾರೆ.
ಶನಿವಾರದಂದು ಮಕ್ಕಳು ಶಾಲೆಗೆ ಬ್ಯಾಗ್ ತರ ಬೇಕಾಗಿಲ್ಲ. ಶಾಲೆಯಲ್ಲಿ ನೈತಿಕ ಪಾಠ, ಯೋಗ, ಆಟ, ವ್ಯಾಯಾಮದಂತಹ ಚಟುವಟಿಕೆಗಳನ್ನು ನಡೆ ಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಮೂಲಕ ಮಕ್ಕಳಿಗೆ ಬ್ಯಾಗ್ ಹೊರೆ ತಪ್ಪಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
1ನೇ ಕ್ಲಾಸಿಗೆ ಆರು ವರ್ಷ ಕಡ್ಡಾಯ, ನಿಯಮಕ್ಕೆ ಎರಡು ವರ್ಷ ವಿನಾಯಿತಿ:
ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಕಡ್ಡಾಯವಾಗಿ ಆರು ವರ್ಷ ವಯಸ್ಸು ಪೂರ್ಣಗೊಂಡಿರಬೇಕೆಂಬ ನಿಯಮದಿಂದ ಪ್ರಸ್ತುತ ಎಲ್ ಕೆ ಜಿ ಮತ್ತು ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ( ಅಂದರೆ ಎರಡು ವರ್ಷ ) ವಿನಾಯಿತಿ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.
ಶಿಕ್ಷಣ ಹಕ್ಕು ಕಾಯ್ದೆಯ ಅನುಸಾರ ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯದ ಮೇಲೆ ಒಂದನೇ ತರಗತಿಗೆ ಆರು ವರ್ಷ ವಯೋಮಿತಿ ಕಡ್ಡಾಯಗೊಳಿಸಲಾಗುತ್ತಿದೆ. ಈಗಾಗಲೇ ದೇಶದ 23 ರಾಜ್ಯಗಳಲ್ಲಿ ಬರುವ ವರ್ಷದಿಂದ ಕಡ್ಡಾಯ ಮಾಡಲಾಗುತ್ತದೆ.