ಸುದ್ದಿವಿಜಯ, ಜಗಳೂರು: ರಾತ್ರಿವೊತ್ತು ಮನೆಯ ಮುಂದೆ ಹಾಗೂ ಕಣಗಳಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರೇಲರ್ ಹಾಗೂ ಇಂಜಿನ್ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಜಗಳೂರು ಪೊಲೀಸರ ತಂಡ ಬಂಧಿಸಿದೆ ಎಂದು ಐಪಿಎಸ್ ಅಧಿಕಾರಿ ಕನ್ನಿಕಾ ಸಿಕ್ರಿವಾಲ್ ಹೇಳಿದರು.
ಶನಿವಾರ ಸಂಜೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿತ್ರದುರ್ಗ ತಾಲೂಕು ಭರಮಸಾಗರ ಹೋಬಳಿಯ ಹೊಸಹಟ್ಟಿ ಗ್ರಾಮದ ಸುರೇಶ್ (23) ಮತ್ತು ಅದೇ ಗ್ರಾಮದ ಅಜಯ್ (19) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಕೆಲ ದಿನಗಳ ಹಿಂದೆ ಜಗಳೂರು ಹಾಗೂ ಬಿಳಿಚೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾದ ಏಳು ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಇಂಜಿನ್ ಮತ್ತು 2 ಟ್ಯಾಕ್ಟರ್ ಟ್ರೇಲರ್ಗಳು ಹಾಗೂ 2 ದ್ವಿಚಕ್ರ ವಾಹನಗಳನ್ನು ಬಂಧಿತ ವ್ಯಕ್ತಿಗಳಿಂದ ವಶಕ್ಕೆ ಪಡೆಯಲಾಗಿದೆ ಎಂದರು.
ಜಗಳೂರು ಪಿಐ ಸತ್ಯನಾರಾಯಣ ಮಾರ್ಗದರ್ಶನದಲ್ಲಿ, ಪಿಎಸ್ಐ ಮಹೇಶ್ ಹೊಸಪೇಟ, ಪಿಎಸ್ಐ ಡಿ.ಸಾಗರ್, ಸಿ.ಎನ್.ಬಸವರಾಜ್ ಹಾಗೂ ಸಿಬ್ಬಂದಿಗಳಾದ ಎಎಸ್ಐ ಕರಿಬಸಪ್ಪ, ಎಎಸ್ಐ ಚಂದ್ರಶೇಖರ್, ಸೈಯದ್ ಗಫಾರ್, ತಿಮ್ಮೇಶ್, ನಾಗಭೂಷಣ್, ಹನುಮಂತ ಕವಾಡಿ, ಮಾರಪ್ಪ, ಪಂಪಾನಾಯ್ಕ, ಡಿಪಿಒ ಸಿಬ್ಬಂದಿ ರಾಘವೇಂದ್ರ ಮತ್ತು ಶಾಂತರಾಜ್ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಪಿ ಸಿ.ಬಿ.ರಿಷ್ಯಂತ್ ಮತ್ತು ಹೆಚ್ಚುವರಿ ಎಸ್ಪಿ ಆರ್.ಬಿ.ಬಸರಗಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಕನ್ನಿಕಾಸಿಕ್ರಿವಾಲ್ ತಿಳಿಸಿದರು.
ಶೀಘ್ರವೇ ಜಗಳೂರು ಪಟ್ಟಣದ ಮಹಾತ್ಮಾಗಾಂಧಿ ವೃತ್ತ, ಮಹಾತ್ಮಾ ಗಾಂಧಿ ಬಸ್ನಿಲ್ದಾಣ ಮತ್ತು ಅಂಬೇಡ್ಕರ್ ವೃತ್ತಕ್ಕೆ, ತಾಲೂಕು ಕಚೇರಿ ಮುಂಭಾಗ, ಸರಕಾರಿ ಆಸ್ಪತ್ರೆ ಮುಂದೆ ಸಿಸಿಟಿವಿ ಅಳವಿಡಲಾಗುವುದು. ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ದೂರುಗಳು ಬರುತ್ತಿದ್ದು ಸಂಜೆ ಮತ್ತು ರಾತ್ರಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಮದ್ಯ ಮಾರಟ ಪ್ರಕರಣಗಳ ಬಗ್ಗೆ ವರದಿಯಾಗಿದ್ದು ಶೀಘ್ರವೇ ನಿಯಂತ್ರಣಕ್ಕೆ ವಿಶೇಷ ತಂಡ ರಚಿಸುತ್ತೇವೆ .
-ಕನ್ನಿಕಾ ಸಿಕ್ರಿವಾಲ್ , ಐಪಿಎಸ್ ಅಧಿಕಾರಿ