ಉತ್ತಮ ಮಳೆ: ಜಗಳೂರು ತಾಲೂಕಿನಾದ್ಯಂತ ಚುರುಕುಗೊಂಡ ಬಿತ್ತನೆ. ಎಲ್ಲಿ ಎಷ್ಟು ಬಿತ್ತನೆಯಾಗಿದೆ ಗೊತ್ತಾ?

Suddivijaya
Suddivijaya June 18, 2022
Updated 2022/06/18 at 3:17 AM

(ವಿಶೇಷ ವರದಿ )

ಸುದ್ದಿ ವಿಜಯ, ಜಗಳೂರು: ದಾವಣಗೆರೆ ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ತಾಲೂಕು ಎಂದೇ ಹೆಸರಾಗಿರುವ ಜಗಳೂರು ತಾಲೂಕಿನಲ್ಲಿ ಪ್ರಸ್ತುತ ವರ್ಷದ ಮುಂಗಾರಿನಲ್ಲಿ ಬರ್ಜರಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ.

ತಾಲೂಕಿನಲ್ಲಿ ಸರಾಸರಿ ವಾರ್ಷಿಕ ಮಳೆಯ ಪ್ರಮಾಣ 528 ಮಿ.ಮೀ. ಮಾರ್ಚ್ 1 ರಿಂದ ಮೇ 31ರ ವರೆಗೆ ಪ್ರತಿವರ್ಷ 95 ಮಿ.ಮೀ ಮಳೆ ಸುರಿಯುವುದು ವಾಡಿಕೆ. ಆದರೆ ಈ ವರ್ಷ ಇದೇ ಅವದಿಯಲ್ಲಿ 236 ಮಿ.ಮೀ. ಮಳೆಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಇಮ್ಮಡಿಯಾಗಿದೆ.

ಪ್ರತಿವರ್ಷ ಮುಂಗಾರ ಮಳೆ ಜೂನ್ 1 ರಿಂದ 17 ರ ವರೆಗೆ ೩೮ ಮಿ.ಮೀ ಸುರಿಯುತ್ತದೆ. ಆದರೆ ಈ ವರ್ಷ ಸರಾಸರಿ63 ಮಿ.ಮೀ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕಸಬ ಹೋಬಳಿಯಲ್ಲಿ ಈ ಬಾರಿ 38 ರಿಂದ 56 ಮಿ.ಮೀ ಮಳೆ ಸುರಿದಿದೆ. ಬಿಳಿಚೋಡು ವ್ಯಾಪ್ತಿಯಲ್ಲಿ68 ಮಿ.ಮೀ ಮಳೆಯಾಗಿದೆ.

ಇನ್ನು ಸೊಕ್ಕೆ/ಹೊಸಕೆರೆ ಭಾಗದಲ್ಲಿ42 ರಿಂದ 70 ಮಿ.ಮೀ ಮಳೆಯಾಗಿದ್ದು ಪ್ರಧಾನ ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ತೊಗರಿ, ಶೇಂಗಾ, ಸೂರ್ಯಕಾಂತಿ ಬಿತ್ತನೆ ಕಾರ್ಯದಲ್ಲಿ ಅನ್ನದಾತರು ತಲ್ಲೀನರಾಗಿದ್ದಾರೆ. ಭೂಮಿಯ ತೇವಾಂಶ ಉತ್ತಮವಾಗಿದ್ದು ಚುರುಕಾಗಿ ಹೊಲಗಳನ್ನು ಹದ ಮಾಡುತ್ತಾ ಲಗುಬಗೆಯಿಂದ ಬಿತ್ತನೆಯಲ್ಲಿ ತಲ್ಲೀನರಾಗಿದ್ದಾರೆ.

ಬಿತ್ತನೆಯಾಗಿರುವುದೆಷ್ಟು?

ತಾಲೂಕಿನಲ್ಲಿ ಒಟ್ಟು 55,500 ಹೆಕ್ಟೇರ್ ಸಾಗುವಳಿ ಭೂ ವಿಸ್ತೀರ್ಣವಿದೆ. ಅದರಲ್ಲಿ 34460 ಹೆಕ್ಟೇರ್ ಗುರಿ ಹೊಂದಿದ್ದು ಇಲ್ಲಿಯವರೆಗೆ 21376 ಹೆಕ್ಟೇರ್ ಬಿತ್ತನೆಯಾಗಿದೆ. ಇನ್ನು ತೊಗರಿ ಬಿತ್ತನೆ 3500 ಹೆಕ್ಟೇರ್ ಗುರಿಯಲ್ಲಿ 1418 ಹೆಕ್ಟೇರ್ ಬಿತ್ತನೆ ಮುಗಿದಿದೆ. ಪ್ರತಿವರ್ಷ ಅಂದಾಜು 50 ಹೆಕ್ಟೇರ್ ನಲ್ಲಿ ಹೆಸರು ಬಿತ್ತನೆ ಮಾಡುತ್ತಿದ್ದ ರೈತರು ಈ ಬಾರಿ 105 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದಾರೆ.

ಶೇಂಗಾವನ್ನು ತಾಲೂಕಿನಾದ್ಯಂತ 10 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಿದ್ದು ಈಗಾಗಲೇ 1324 ಹೆಕ್ಟೇರ್ ಬಿತ್ತನೆ ಪೂರ್ಣಗೊಂಡಿದೆ. ಶೇಂಗಾ ಬಿತ್ತನೆಗೆ ಜುಲೈ ೨ನೇ ವಾರದವರೆಗೂ ಸಮಯವಿರುವ ಕಾರಣ ಬಿತ್ತನೆ ಕಾರ್ಯ ಜೋರಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಶೇ.62 ಬಿತ್ತನೆ ಕಾರ್ಯ ಮುಗಿದಿದ್ದು, ಶೇ.38ರಷ್ಟು ಬಾಕಿಯಿದೆ.

‘ಬಿಳಿ ಬಂಗಾರ’ ಬಿತ್ತಿದ ರೈತರು:
ಕಳೆದ ಬಾರಿ ಈರುಳ್ಳಿಗೆ ಬೆರು ಕೊಳೆರೋಗ ಮತ್ತು ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ್ದ ರೈತರು ಈ ಬಾರಿ ಹತ್ತಿ ಬೆಳೆಗೆ ಮೊರೆ ಹೋಗಿದ್ದಾರೆ. ಕಳೆದ ವರ್ಷ ಗುಣಮಟ್ಟದ ಹತ್ತಿಗೆ ಮಾರುಕಟ್ಟೆಯಲ್ಲಿ 13 ರಿಂದ 17 ಸಾವಿರದ ವರೆಗೆ ದರ ಸಿಕ್ಕ ಹಿನ್ನೆಲೆಯಲ್ಲಿ ಈರುಳ್ಳಿ ಬಿತ್ತನೆ ಹಿಮ್ಮುಖವಾಗಿದೆ. ಪ್ರತಿ ವರ್ಷ 3040 ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯುತ್ತಿದ್ದ ಅನ್ನದಾತ ಈಬಾರಿ 4445 ಹೆಕ್ಟೇರ್ ನಲ್ಲಿ ಹತ್ತಿ ಬಿತ್ತನೆ ಮಾಡಿರುವುದು ವಾಣಿಜ್ಯ ಬೆಳೆಕಡೆ ವಾಲಿದ್ದು ಆರ್ಥಿಕ ವೃದ್ಧಿಗೆ ‘ಬಿಳಿ ಬಂಗಾರ’ ಹತ್ತಿ ವರದಾನ ವಾಗಬಹುದು ಎನ್ನುವ ಆಶಾಭಾವ ರೈತರಲ್ಲಿ ಮೂಡಿದೆ.

ಎಫ್‌ಪಿಒ ರೈತರಿಗೆ ವರದಾನ:
ಜಲಾನಯನ ಯೋಜನೆ ಅಡಿ ಜಗಳೂರು ತಾಲೂಕಿನಲ್ಲಿ ಉತ್ತಮವಾದ ಕಾರ್ಯವಾಗಿದೆ. 75 ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಗುಚ್ಛ ಗ್ರಾಮಗಳನ್ನೊಳಗೊಂಡ ‘ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಗೆ’ ಕೃಷಿ ಇಲಾಖೆಯಿಂದ ಸಂಪೂರ್ಣ ಸಹಕಾರ ಸಿಕ್ಕಿದೆ. ಪ್ರವೇಶ ದ್ವಾರ ಚಟುವಟಿಕೆ ಅಡಿ ಫಾರ್ಮ ಮಿಷನರಿ ಬ್ಯಾಂಕ್‌ನಿAದ ೮೦:೨೦ ಅನುಪಾತದಲ್ಲಿ 8 ಲಕ್ಷ ಸರಕಾರದಿಂದ ಮತ್ತು 2 ಲಕ್ಷ ರೂ ಶೇರುದಾರ ರೈತರಿಗೆ ಟ್ಯಾಕ್ಟರ್ ಮತ್ತು ಉಪಕರಣಗಳನ್ನು ನೀಡಲಾಗಿದೆ. ಬಿತ್ತನೆಗೆ ಬೇಕಾಗುವ ಗೊಬ್ಬರ, ಬಿತ್ತನೆ ಬೀಕಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರ ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡುವಲ್ಲಿ ದಾಣಗೆರೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮತ್ತು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಬಿ.ವಿ.ಶ್ರೀನಿವಾಸುಲು ಯಶಸ್ವಿಯಾಗಿ ಮಾಡಿದ್ದಾರೆ.

ಲದ್ದಿ ಹುಳು ನಿಯಂತ್ರಣಕೆ ರೈತರು ಹೀಗೆ ಮಾಡಿ !

15 ರಿಂದ ೨೦ ದಿನಗಳ ಮೆಕ್ಕೆಜೋಳ ಬೆಳೆಗೆ ಈಗಾಗಲೇ ಲದ್ದಿ ಹುಳುಗಳು ಬಿದ್ದಿದ್ದು, ತಕ್ಷಣವೇ ರೈತರು ತಮ್ಮ ಹೊಲಗಳಲ್ಲಿ ಸುತ್ತಾಡಿ ಮಾದರಿಗಳನ್ನು ಸಂಗ್ರಹಿಸಿ ಕೃಷಿ ಇಲಾಖೆ ಸಂಪರ್ಕಿಸಬೇಕು. ಹುಳುಬಾಧೆ ನಿಯಂತ್ರಣಕ್ಕೆ ರೈತ ಸಂಪರ್ಕ ಕೇಂದ್ರದಲ್ಲಿ ಔಷಧಿಗಳು ಲಭ್ಯವಿದೆ. ಜೊತೆಗೆ ವೈಜ್ಞಾನಿಕವಾಗಿ ಕೀಟ ನಿಯಂತ್ರಣಕ್ಕೆ ಸಂಪನ್ಮೂಲ ಸಂಸ್ಥೆಯಾದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಿ.
-ಬಿ.ವಿ.ಶ್ರೀನಿವಾಸುಲು, ಸಹಾಯಕ ಕೃಷಿ ನಿರ್ದೇಶಕರು, ಜಗಳೂರು

ತಕ್ಷಣವೇ ಮಳೆ ಬೇಕು:

ಬಿತ್ತನೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಕಳೆದ 8 ದಿನಗಳಿಂದ ಮಳೆ ಬಂದಿಲ್ಲ. ಆದರೂ ಭೂಮಿಯಲ್ಲಿ ತೇವಾಂಶವಿದೆ. ತಕ್ಷಣವೇ ಸ್ವಲ್ಪ ಜಡಿ ಮಳೆ ಬಂದರೂ ಸಾಕು. ನಮಗೆ ಸಹಾಯವಾಗುತ್ತದೆ.
ಜೀವಣ್ಣ, ಚಂದ್ರಪ್ಪ, ರೈತರು, ತೋರಣಗಟ್ಟೆ ಗ್ರಾಮ

ಲದ್ದಿ ಹುಳುಗಳ ಕಾಟವೇ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 

ದೂರವಾಣಿ: ಕಸಬಾ ಹೋಬಳಿಯ ರೈತರು ಎ.ಡಿ ಕೃಷ್ಣಪ್ಪ, 8317486321, ಬಿಳಿಚೋಡು ರೈತರು ಹರ್ಷ ಸಂಪರ್ಕಿಸಿ: 8277931173, ಹೊಸಕೆರೆ ಭಾಗದ ರೈತರು ಜೀವತಿ ಸಂಪರ್ಕಿಸಿ: 877931176: ಲದ್ದಿ ಹುಳು ಬಾಧೆ ನಿಯಂತ್ರಣಕ್ಕೆ ಟಿಕೆವಿಕೆ ದಾವಣಗೆರೆ ಸ್ಥಿರ ದೂರವಾಣಿ: 08192- 263462 08192 -297142 ಸಂಪರ್ಕಿಸಿ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!