ಸುದ್ದಿವಿಜಯ, ದುಬೈ(ಪಿಟಿಐ): ತಿನ್ನೋ ಅನ್ನಕ್ಕೂ ಲಾಟ್ರೀ ಹೊಡೆಯುತ್ತಿದ್ದ ಆತ ದುಡಿಯೋಕಂತ ದುಬೈ ಹೋಗಿದ್ದ. ಕೆಲಸಕ್ಕೆ ಹೋದವ ರಾತ್ರಿ ಮಲಗಿ ಬೆಳಗಾಗೋದ್ರೋಳಗೆ ಕೋಟಿ ಕೋಟಿ ಒಡೆಯನಾದ!
ಆಶ್ಚರ್ಯವಾದ್ರೂ ಇದು ಸತ್ಯ. ಭಾರತೀಯ ಮೂಲದ ಡ್ರೈವರ್ ಒಬ್ಬರು ಇಲ್ಲಿನ ದುಬೈನ ‘ಎಮಿರೇಟ್ಸ್ ಡ್ರಾ‘ ಲಾಟರಿಯಲ್ಲಿ ಬರೋಬ್ಬರಿ 33 ಕೋಟಿ ರೂ ಗೆದ್ದಿದ್ದಾರೆ.
ಅಜಯ್ ಒಗುಲಾ ಎಂಬವರೇ ಇಷ್ಟು ಮೊತ್ತದ ಲಾಟರಿ ಗೆದ್ದ ಅದೃಷ್ಟವಂತ. ನಾಲ್ಕು ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ದುಬೈಗೆ ತೆರಳಿದ್ದ ಅಜಯ್, ಸದ್ಯ ಜ್ಯುವೆಲರಿ ಅಂಗಡಿಯೊಂದರ ವಾಹನ ಚಾಲಕನಾಗಿ ದುಡಿಯುತ್ತಿದ್ದಾರೆ. ಮಾಸಿಕ 3,200 ದಿರ್ಹಂ (ಸುಮಾರು ₹ 72,000) ಅವರ ವೇತನ.
ಇದೀಗ ಅವರ ವೇತನಕ್ಕಿಂತ ಹಲವು ಪಟ್ಟು ಹಣ ಲಾಟರಿ ರೂಪದಲ್ಲಿ ಅವರನ್ನು ಹುಡುಕಿಕೊಂಡು ಬಂದಿದೆ. ಹಣ ಗೆದ್ದಿರುವ ಖುಷಿಯನ್ನು ಖಲೀಜ್ ಟೈಮ್ಸ್ನೊಂದಿಗೆ ಹಂಚಿಕೊಂಡಿರುವ ಅಜಯ್, ‘ನಾನು ಲಾಟರಿ ಗೆದ್ದಿದ್ದೇನೆ ಎನ್ನುವುದನ್ನು ನಂಬಲಿಕ್ಕಾಗುತ್ತಿಲ್ಲ. ಮನೆವರೊಂದಿಗೆ ಈ ವಿಚಾರ ಹೇಳಿದಾಗಲೂ ಅವರು ನಂಬಲಿಲ್ಲ.
ಈಗ ಮಾಧ್ಯಮಗಳಲ್ಲಿ ಬರುತ್ತಿದೆ, ಅವರು ನಂಬಲೇಬೇಕು‘ ಎಂದು ಹೇಳಿದ್ದಾರೆ. ಅಲ್ಲದೇ ಈ ಹಣದಿಂದ ದತ್ತಿ ಸಂಸ್ಥೆ ಸ್ಥಾಪಿಸಿ, ತನ್ನ ಗ್ರಾಮದ ಹಾಗೂ ಪಕ್ಕದ ಗ್ರಾಮದ ಬಡವರಿಗೆ ನೆರವಾಗುತ್ತೇನೆ ಎಂದು ಹೇಳಿದ್ದಾರೆ.