ಸುದ್ದಿವಿಜಯ ಜಗಳೂರು: ಮಹಿಳೆಯರು ಪುರುಷರಿಗಿಂತ ಕೆಳಗೆ ಎಂಬ ಮನಸ್ಥಿತಿ ಹೊಂದಿದ್ದ ಸಮಾಜದಲ್ಲಿ ದಿಟ್ಟತನದಿಂದ ಶಿಕ್ಷಕ ತರಬೇತಿ ಪಡೆದ ಸಾವಿತ್ರಿಬಾಯಿ ಫುಲೆ ಎಲ್ಲರ ವಿರೋಧದ ನಡುವೆ ತಾವು ಅಂದುಕೊಂಡಿದ್ದನ್ನು ಸಾಧಿಸಿದ ದಿಟ್ಟ ಹೋರಾಟಗಾರ್ತಿ ಎಂದು ಪ್ರಾಂಶುಪಾಲ ಜಗದೀಶ್ ಹೇಳಿದರು.
ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಮಾನವ ಬಂಧುತ್ವ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವಿತ್ರಿಬಾಯಿ ಫುಲೆ ಅವರು ಶಾಲೆಗೆ ಹೊರಟಾಗ ಊರಿನ ಜನರು ಲೇವಡಿ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಕಲ್ಲು ತೂರುವುದು, ಸಗಣಿ ಎರಚುವುದು, ಮೈಮೇಲೆ ಕೆಸರು ಸುರಿಯುವುದು ಹೀಗೆ ಹಲವರು ರೀತಿಯಲ್ಲಿ ಕಿರುಕುಳ ನೀಡಿದರು ಹಿಂಜರಿಯದೇ ದಿಟ್ಟತನದಿಂದಲೇ ಶಿಕ್ಷಣ ಕಲಿಸಿದರು. ಆ ತಾಯಿ ದೇಶಕ್ಕೆ ಮಾದರಿಯಾಗಿದ್ದಾಳೆ ಎಂದರು.
ಮಾನವ ಬಂಧುತ್ವ ವೇದಿಕೆ ಸಂಚಾಲಕ ಧನ್ಯಕುಮಾರ್ ಮಾತನಾಡಿ, 1848ರಿಂದ 1852ರ ಅವಧಿಯಲ್ಲಿ 14 ಶಾಲೆಗಳನ್ನು ದಂಪತಿಗಳು ತೆರೆದರು. ಆಡಳಿತದ ಸಂಪೂರ್ಣ ಜವಾಬ್ದಾರಿ ಸಾವಿತ್ರಿ ಅವರದು.
ಬ್ರಿಟಿಷ್ ಸರ್ಕಾರ ಅವರ ಕಾರ್ಯವನ್ನು ಮೆಚ್ಚಿ ಭಾರತದ ಮೊದಲ ಶಿಕ್ಷಕಿ ಎಂಬ ಮನ್ನಣೆ ನೀಡಿತು. ಸ್ತ್ರಿ?ಯರು ಸಹ ಪುರುಷರಂತೆ ಶಿಕ್ಷಣ ಪಡೆಯಬೇಕು ಎಂಬುದು ಈ ದಂಪತಿಗಳ ಹಂಬಲವಾಗಿತ್ತು. ಸಾವಿತ್ರಿಬಾಯಿ. ಬಾಲ್ಯವಿವಾಹ, ಸತಿ ಸಹಗಮನ, ವಿಧವೆಯರಿಗೆ ಕೇಶಮುಂಡನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ನಡೆಸಿದ ಅವರು, ಮಹಿಳೆಯರಿಗಾಗಿಯೇ ಶಾಲೆಗಳು, ಅಬಲಾಶ್ರಮಗಳನ್ನು ಸ್ಥಾಪಿಸಿದರು ಎಂದು ಮಾಹಿತಿ ನೀಡಿದರು.
ಡಿಎಸ್ ಎಸ್ ತಾಲೂಕು ಸಂಚಾಲಕ ಸತೀಶ್ ಮಲೆಮಾಚಿಕೆರೆ ಮಾತನಾಡಿ, ಹೆಣ್ಣುಮಕ್ಕಳು ಕುಟುಂಬಕ್ಕೆ ಮಕ್ಕಳ ಹೇರುವ ಕಾರ್ಖಾನೆಯಾಗಿರಬೇಕು, ವರ್ಣ ವ್ಯವಸ್ಥೆ ಜಾರಿಯಲ್ಲಿದ್ದ ಮನುಸ್ಮೃತಿಯನ್ನು ವಿರೋಧಿಸಿದ ಫುಲೆ ದಂಪತಿಗಳು ಸಾಕಷ್ಟು ಶೋಷಣೆ ಅನುಭವಿಸಿ ಶೋಷಿತ ಮಹಿಳೆಯರ ನಾಲಿಗೆಯ ಮೇಲೆ ಅಕ್ಷರ ಉಣಬಡಿಸಿದರು ಎಂದರು.
ಈ ಸಂದರ್ಭದಲ್ಲಿ ಎಐಎಸ್ ಎಫ್ ರಾಜ್ಯ ಸಹಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್, ಮಾನವಬಂಧುತ್ವ ವೇದಿಕೆ ಸಹ ಸಂಚಾಲಕ ತಿಪ್ಪೇಸ್ವಾಮಿ, ಹೊನ್ನೂರುಸ್ವಾಮಿ, ವಿಕಲ ಚೇತನ ಸಂಘಟನೆಯ ಮಹಾಂತೇಶ್ ಬ್ರಹ್ಮ, ಉಪನ್ಯಾಸಕರಾದ ಸ್ವಪ್ನ, ಹರಿಶ್ಚಂದ್ರ ನಾಯ್ಕ, ಹೊನ್ನೂರು ಸಾಬ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಇದೇ ವೇಳೆ ಲಿಂಗೈಕ್ಯ ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಮಹಾ ಸ್ವಾಮೀಜಿಗಳಿಗೆ ನುಡಿನಮನ ಅರ್ಪಿಸಿದರು.